ಚಿಕ್ಕಬಳ್ಳಾಪುರ: ರಸ್ತೆ ಜಾಗದ ವಿಚಾರವಾಗಿ ಅಕ್ಕ-ಪಕ್ಕದವರೊಂದಿಗೆ ಜಗಳ ನಡೆದಿದ್ದು, ಈ ವೇಳೆ ಹಲ್ಲೆ ಮಾಡಿದವರ ವಿರುದ್ಧ ಅಪ್ರಾಪ್ತ ಬಾಲಕ ಕಲ್ಲು ತೂರಿದ್ದಾನೆ. ಹೀಗಾಗಿ ಜೈಲಿಗೆ ಹಾಕುವ ಭಯದಲ್ಲಿ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಈ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕವರನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕವರನಹಳ್ಳಿ ಗ್ರಾಮದ ಮಂಜುನಾಥ್ ಹಾಗೂ ಪುಷ್ಪ ದಂಪತಿಯ ಮಗ ಸುದೀಪ್ (16) ಆತ್ಮಹತ್ಯೆಗೆ ಶರಣಾದ ಬಾಲಕ. ಆತ್ಮಹತ್ಯೆ ಮಾಡಿಕೊಂಡ ಬಾಲಕನ ಕುಟುಂಬ ಹಾಗೂ ಅದೇ ಗ್ರಾಮದ ಮತ್ತೊಂದು ಕುಟುಂಬದ ಮಧ್ಯೆ ರಸ್ತೆ ಜಾಗದ ವಿಚಾರವಾಗಿ ಮನಸ್ತಾಪವಿದೆ.
ಶುಕ್ರವಾರ ಸಂಜೆ ವಿರೋಧಿ ಕುಟುಂಬಗಳಾದ ಗ್ರಾಮದ ರಾಮಯ್ಯ-ಲಕ್ಷ್ಮಮ್ಮ ದಂಪತಿ, ಲಕ್ಷಯ್ಯ-ಆಶಮ್ಮ ದಂಪತಿ ಸೇರಿಕೊಂಡು ವಿವಾದಿತ ರಸ್ತೆಯಲ್ಲಿ ನಡೆದು ಬರುತ್ತಿದ್ದಾರೆ. ಆ ಸಂದರ್ಭದಲ್ಲಿ ಬಾಲಕ ಹಾಗೂ ಆತನ ಸಹೋದರಿಯೊಂದಿಗೆ ಜಗಳ ಮಾಡಿದ್ದಾರೆ. ಹಲ್ಲೆಯನ್ನೂ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಕೋಪಗೊಂಡ ಬಾಲಕ ಅವರ ಮೇಲೆ ಇಟ್ಟಿಗೆ ಎಸೆದಿದ್ದಾನೆ. ಅದು ರಾಮಯ್ಯ ಎಂಬಾತನಿಗೆ ತಗುಲಿ ಗಾಯವಾಗಿದೆ. ಕೂಡಲೇ ರಾಮಯ್ಯ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಾಲಕ ಹಾಗೂ ಆತನ ತಂದೆ ವಿರುದ್ಧ ದೂರು ನೀಡಿದ್ದಾನೆ. ಇದರಿಂದ ಭಯಭೀತನಾದ ಬಾಲಕ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.
ಬಾಲಕ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ದೂರು ನೀಡಿದವರ ಕುಟುಂಬ ನಾಪತ್ತೆಯಾಗಿದೆ. ಈ ಕುರಿತು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.