ದಾವಣಗೆರೆ: ಗಣೇಶೋತ್ಸವ ಮುಗಿಯುವವರೆಗೆ ರೇಣುಕಾಚಾರ್ಯರನ್ನು ಜೈಲಿಗೆ ಹಾಕಿ ಎಂದು ಹರಿಹರ ಕ್ಷೇತ್ರದ ಮಾಜಿ ಶಾಸಕ ಎಸ್.ರಾಮಪ್ಪ ಹೇಳಿದ್ದಾರೆ.
ಗಣೇಶೋತ್ಸವಕ್ಕೆ ಡಿಜೆ ನಿಷೇಧಕ್ಕೆ ಕಾಂಗ್ರೆಸ್ ಮಾಜಿ ಶಾಸಕ ಎಸ್.ರಾಮಪ್ಪ ಸ್ವಾಗತಿಸಿದ್ದು, ಡಿಜೆ ಬ್ಯಾನ್ ವಿರೋಧಿಸುತ್ತಿರುವ ರೇಣುಕಾಚಾರ್ಯ ಅವರನ್ನು ಗಣೇಶೋತ್ಸವ ಮುಗಿಯುವವರೆಗೆ ವಶಕ್ಕೆ ಪಡೆಯುವುದು ಒಳ್ಳೆಯದು ಎಂದಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ರಾಮಪ್ಪ, ಡಿಜೆಯಿಂದ ವಯೋವೃದ್ದರಿಗೆ, ಮಕ್ಕಳಿಗೆ, ಹೃದಯ ಸಮಸ್ಯೆ ಇದ್ದವರಿಗೂ ತೊಂದರೆ ಆಗುತ್ತದೆ. ಹಾಗಾಗಿ ಡಿಜೆ ಬಳಸಬೇಡಿ ಎಂದು ಯುವಕರಲ್ಲಿ ಮನವಿ ಮಾಡುತ್ತೀನಿ. ಎಸ್ ಎಸ್‌ಎಲ್‌ಸಿ, ಪಿಯುಸಿ ಮಕ್ಕಳು ಮದ್ಯ ಸೇವಿಸಲು ಕಲಿತಿದ್ದಾರೆ. ಮುಂದಿನ ಅವರ ಜೀವನ ಗತಿ ಏನು? ಸಾಂಪ್ರದಾಯಿಕ ಡೊಳ್ಳು ಕುಣಿತ, ಕೋಳಿ ಕುಣಿತ ಬಳಸಿ ಮೆರವಣಿಗೆ ಮಾಡಿ ಎಂದು ಹೇಳಿದ್ದಾರೆ.
ತಾಕತ್ ಇದ್ದರೆ ನಿಲ್ಲಿಸಿ ಎಂದು ಮಾಜಿ ಸಚಿವ ರೇಣುಕಾಚಾರ್ಯ ಚಾಲೆಂಜ್ ಮಾಡುತ್ತಾರೆ. ಮಾಜಿ ಸಚಿವರಾಗಿ ಈ ರೀತಿ ಹೇಳುತ್ತಾರೆ ಎಂದರೆ ಇದರ ಅರ್ಥ ಏನು? ಸೌಜನ್ಯಯುತವಾಗಿ ಹೇಳಬಹುದಿತ್ತು, ಈ ರೀತಿ ಹೇಳಿಕೆ ಕೊಡುವುದಲ್ಲಾ.ಅವರಿಗೆ ಗಲಭೆ ಆಗಬೇಕು ಗಲಾಟೆ ಆಗಬೇಕು ರಾಜಕೀಯ ಲಾಭ ಪಡೆಯಬೇಕು ಅಷ್ಟೇ. ಆ ಮಾತು ಹೇಳಲು ರೇಣುಕಾಚಾರ್ಯರಿಗೆ ನಾಚಿಕೆ ಆಗಬೇಕು. ಗಣಪತಿ ಹಬ್ಬ ಮುಗಿಯುವವರೆಗೂ ರೇಣುಕಾಚಾರ್ಯರನ್ನು ವಶಕ್ಕೆ ಪಡೆದರೆ ಜಿಲ್ಲೆ ಶಾಂತಿಯುತವಾಗಿ ಇರುತ್ತೆದೆ ಎಂದು ತಿಳಿಸಿದ್ದಾರೆ.