ಅಲ್ಲು ಅರ್ಜುನ್ ನಟಿಸಿರುವ ಪುಷ್ಪ 2 ಚಿತ್ರ ಕರ್ನಾಟಕದಲ್ಲೂ ದಾಖಲೆ ಬರೆದಿದೆ.
ಡಿಸೆಂಬರ್ 5ರಂದು ದೇಶಾದ್ಯಂತ ಬಿಡುಗಡೆ ಆಗಿದ್ದ ‘ಪುಷ್ಪ 2’ ಸಿನಿಮಾ ದಾಖಲೆಯ ಗಳಿಕೆ ಮಾಡುತ್ತ ಮುನ್ನುಗ್ಗುತ್ತಿದೆ. ಸದ್ಯದ ಚಿತ್ರದ ಓಟ ಗಮನಿಸಿದರೆ, ಕೆಲವೇ ದಿನಗಳಲ್ಲೇ ಸಾವಿರ ಕೋಟಿ ರೂ. ಕ್ಲಬ್ ಸೇರಿದರೂ ಅಚ್ಚರಿ ಪಡಬೇಕಿಲ್ಲ. ಈಗ ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಎಂಬುವುದರ ಕುರಿತು ‘ಪುಷ್ಪ 2’ ಸಿನಿಮಾ ತಂಡ ಅಧಿಕೃತವಾಗಿ ಘೋಷಣೆ ಮಾಡಿದೆ.
ಚಿತ್ರವನ್ನು ಅಭಿಮಾನಿಗಳು ಇಷ್ಟ ಪಟ್ಟಿದ್ದು, ದಿನದಿಂದ ದಿನಕ್ಕೆ ನೋಡುಗರ ಸಂಖ್ಯೆ ಹೆಚ್ಚಾಗುತ್ತಿದೆ. ಸಾವಿರಾರು ಚಿತ್ರ ಮಂದಿರಗಳಲ್ಲಿ ಸಿನಿಮಾ ಹೌಸ್ ಫುಲ್ ಆಗಿ ಪ್ರದರ್ಶನ ಕಾಣುತ್ತಿದೆ.
ಕರ್ನಾಟಕದಲ್ಲಿ ಮೊದಲ ದಿನ ಈ ಚಿತ್ರ 23.7 ಕೋಟಿ ರೂ. ಕಲೆಕ್ಷನ್ ಮಾಡಿದೆ. ಆದರೆ, ಕನ್ನಡ ವರ್ಷನ್ ನಿಂದ ಈ ಚಿತ್ರಕ್ಕೆ ಸಿಕ್ಕಿದ್ದು ಕೇವಲ 1 ಕೋಟಿ ರೂ. ಮಾತ್ರ. ತೆಲುಗು ವರ್ಷನ್ ನಿಂದಸೇ ಈ ಚಿತ್ರಕ್ಕೆ ದೊಡ್ಡ ಮಟ್ಟದ ಲಾಭ ಬಂದಿದೆ. ಹೀಗಾಗಿ ತೆಲುಗು ಚಿತ್ರವೊಂದು ಕರ್ನಾಟಕದಲ್ಲಿ ಮೊದಲ ದಿನ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡಿರುವ ದಾಖಲೆಯನ್ನೂ ಈ ಚಿತ್ರ ಬರೆದಿದೆ.
ಈ ಚಿತ್ರ ಬೆಂಗಳೂರು ನಗರದಲ್ಲಿ ಸಾವಿರಕ್ಕೂ ಅಧಿಕ ಶೋಗಳನ್ನು ಕಾಣುತ್ತಿದೆ. ಒಟ್ಟಾರೆ ಈ ಚಿತ್ರ ಮೊದಲ ದಿನ ದೇಶದಲ್ಲಿ 175 ಕೋಟಿ ರೂ. ಗಳಿಕೆ ಮಾಡಿದೆ ಎನ್ನುವುದು ವಿಶೇಷ.