ಲಕ್ನೋ: ಪಂಜಾಬ್ ಎಲೆವೆನ್ ತಂಡ ಸತತ ಎರಡನೇ ಗೆಲುವು ದಾಖಲಿಸಿದೆ. ಪ್ರಭಸಿಮ್ರನ್ ಸಿಂಗ್ (Prabhsimran Singh) ಮತ್ತು ಶ್ರೇಯಸ್ ಅಯ್ಯರ್ (Shreyas Iyer) ಆಕರ್ಷಕ ಅರ್ಧಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ (Punjab Kings) ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ವಿರುದ್ಧ ಗೆಲುವು ಸಾಧಿಸಿದೆ.
ಲಕ್ನೋ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿರುವ ಪಂಜಾಬ್, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಪಂಜಾಬ್ 16.2 ಓವರ್ ಗಳಲ್ಲಿ 177 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಪ್ರಿಯಾಂಶ್ ಆರ್ಯ 8 ರನ್ ಗಳಿಸಿ ಔಟಾದರೂ ಎರಡನೇ ವಿಕೆಟಿಗೆ ಪ್ರಭಸಿಮ್ರನ್ ಸಿಂಗ್ ಮತ್ತು ಶ್ರೇಯಸ್ ಅಯ್ಯರ್ 44 ಎಸೆತಗಳಲ್ಲಿ 84 ರನ್ ಗಳಿಸಿತು. ಮೂರನೇ ವಿಕೆಟಿಗೆ ಶ್ರೇಯಸ್ ಮತ್ತು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕೆ ಇಳಿದ ನೆಹಾಲ್ ವಧೇರಾ 37 ಎಸೆತಗಳಲ್ಲಿ 67 ರನ್ ಜೊತೆಯಾಟವಾಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.
ಪ್ರಭಸಿಮ್ರನ್ ಸಿಂಗ್ 69 ರನ್ (34 ಎಸೆತ, 9 ಬೌಂಡರಿ, 3 ಸಿಕ್ಸ್), ಶ್ರೇಯಸ್ ಅಯ್ಯರ್ ಔಟಾಗದೇ 52 ರನ್(30 ಎಸೆತ, 3 ಬೌಂಡರಿ, 4 ಸಿಕ್ಸ್), ನೆಹಾಲ್ ವಧೇರಾ ಔಟಾಗದೇ 43 ರನ್ ( 25 ಎಸೆತ, 3 ಬೌಂಡರಿ, 4 ಸಿಕ್ಸ್) ಸಿಡಿಸಿದರು. ಲಕ್ನೋ ಪರ ನಿಕೂಲಸ್ ಪೂರನ್ 44 ರನ್ (30 ಎಸೆತ, 5 ಬೌಂಡರಿ, 2 ಸಿಕ್ಸ್), ಆಯುಷ್ ಬದೋನಿ 41 ರನ್(33 ಎಸೆತ, 1 ಬೌಂಡರಿ, 3 ಸಿಕ್ಸ್) ಸಿಡಿಸಿ ತಂಡದ ರನ್ ಹೆಚ್ಚಿಸಿದರು.