ಪುಣೆ: ಪುಣೆಯ ಬಿಬ್ವೇವಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, 36 ವರ್ಷದ ಮಹಿಳೆಯೊಬ್ಬರು ತಮ್ಮ 24 ವರ್ಷದ ಗೆಳೆಯನೊಂದಿಗೆ ಸೇರಿ ತನ್ನ 14 ವರ್ಷದ ಅಪ್ರಾಪ್ತ ಮಗಳನ್ನು ಸ್ನಾನ ಮಾಡುವಾಗ ಮತ್ತು ಬಟ್ಟೆ ಬದಲಾಯಿಸುವಾಗ ರಹಸ್ಯವಾಗಿ ವಿಡಿಯೋ ಚಿತ್ರೀಕರಿಸಿ ಬೆದರಿಕೆ ಹಾಕಿದ್ದಾಳೆ. ಆ ವಿಡಿಯೋಗಳನ್ನು ಸಂಬಂಧಿಕರು, ಸ್ನೇಹಿತರಿಗೆ ಕಳುಹಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದು, ಏಪ್ರಿಲ್ 13ರಂದು ಬಂಧನಕ್ಕೊಳಗಾಗಿದ್ದಾರೆ. ಬಾಲಕಿಯು ತನ್ನ ತಾಯಿಯ ವಿವಾಹೇತರ ಸಂಬಂಧವನ್ನು ಬಹಿರಂಗಪಡಿಸಿದ್ದು ತನ್ನ ಕೃತ್ಯ ಮತ್ತಷ್ಟು ಬಯಲಾಗುವ ಭಯದಿಂದ ತಾಯಿ ಈ ಕ್ರೂರ ಕೃತ್ಯ ಎಸಗಿದ್ದಾಳೆ.
ಬಿಬ್ವೇವಾಡಿ ಪೊಲೀಸರ ಪ್ರಕಾರ, 14 ವರ್ಷದ ಬಾಲಕಿಯು 8ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ತನ್ನ ತಾಯಿಯ ವಿವಾಹೇತರ ಸಂಬಂಧವನ್ನು ಗಮನಿಸಿ, ವಿಷಯವನ್ನು ಮನೆಯ ಮಾಲೀಕರಿಗೆ ತಿಳಿಸಿದ್ದಳು. ಇದರಿಂದ ಕೋಪಗೊಂಡ ತಾಯಿ. ತನ್ನ ಗೆಳೆಯನ ಸಹಾಯದಿಂದ ಮಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಈ ಕೃತ್ಯವನ್ನು ಮಾಡಿದ್ದಾಳೆ. ತಾಯಿಯ ಸೆಲ್‌ಫೋನ್‌ನಿಂದ ಈ ವಿಡಿಯೋಗಳನ್ನು ಚಿತ್ರೀಕರಿಸಲಾಗಿದ್ದು, ಅದೇ ಫೋನ್‌ನಿಂದ ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಆರೋಪದ ಪ್ರಕಾರ, ತಾಯಿಯು ತನ್ನ ಗೆಳೆಯನಿಗೆ ಮಗಳೊಂದಿಗೆ ಅನೈತಿಕ ಸಂಬಂಧವನ್ನು ಒಪ್ಪಿಕೊಳ್ಳುವುದಕ್ಕೆ ಒತ್ತಾಯಿಸಿದ್ದಳು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಕೃತ್ಯವು ಕೇವಲ ವಿಡಿಯೋ ಚಿತ್ರೀಕರಣ ಮತ್ತು ಪ್ರಸಾರಕ್ಕೆ ಸೀಮಿತವಾಗಿರದೆ, ಮಗಳ ಮೇಲಿನ ದೌರ್ಜನ್ಯವನ್ನು ಮತ್ತಷ್ಟು ತೀವ್ರಗೊಳಿಸಿದೆ.
ಪೊಲೀಸ್ ಕಾರ್ಯಾಚರಣೆ
ಬಾಲಕಿಯ ದೂರಿನ ನಂತರ, ಕಳೆದ ಮೂರು ತಿಂಗಳಿಂದ ಆರೋಪಿಗಳಾದ ತಾಯಿ ಮತ್ತು ಆಕೆಯ ಗೆಳೆಯ ಪರಾರಿಯಾಗಿದ್ದರು. ಸೊಲ್ಲಾಪುರ, ಧಾರಾಶಿವ್, ಛತ್ರಪತಿ ಸಂಭಾಜಿನಗರ, ಅಹಿಲ್ಯಾನಗರ ಮತ್ತು ದಾಂಡ್‌ನಂತಹ ಜಿಲ್ಲೆಗಳಲ್ಲಿ ಪೊಲೀಶರು ಶೋಧ ನಡೆಸಿದ್ದು. ಶನಿವಾರ (ಏಪ್ರಿಲ್ 12ರಂದು ಖಡಕ್‌ವಾಸ್ಲಾ ಪ್ರದೇಶದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.
ಸಬ್ ಇನ್ಸ್‌ಪೆಕ್ಟರ್ ಅಶೋಕ್ ಯೇವಾಲೆ ಮಾತನಾಡಿ, “ತನಿಖೆಯಿಂದ ವಿಡಿಯೋಗಳನ್ನು ತಾಯಿಯ ಸೆಲ್‌ಫೋನ್‌ನಿಂದ ಚಿತ್ರೀಕರಿಸಿ, ಅದೇ ಫೋನ್‌ನಿಂದ ಅಪ್‌ಲೋಡ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ದೂರು ದಾಖಲಾದ ತಕ್ಷಣ ತಾಯಿ ಪುಣೆಯಿಂದ ಪರಾರಿಯಾಗಿದ್ದಳು” ಎಂದು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (IPC)ಯ ಸೆಕ್ಷನ್ 354 (ಮಹಿಳೆಯ ಘನತೆಗೆ ಧಕ್ಕೆ), ಸೆಕ್ಷನ್ 509 (ಮಹಿಳೆಯ ಮಾನಹರಣಕ್ಕೆ ಉದ್ದೇಶಿತ ಕೃತ್ಯ), ಮತ್ತು POCSO (Protection of Children from Sexual Offences) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.