ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ನೆಲ್ಲಿ ಹುದಿಕೇರಿ ಗ್ರಾಮದಲ್ಲಿ ಒಂಟಿ ಸಲಗನ ದಾಳಿ ಹೆಚ್ಚಾಗಿದೆ. ಮನೆ ಸಮೀಪ ನಿಲ್ಲಿಸಿದ್ದ ಆಟೋ ರಿಕ್ಷಾವನ್ನು ಕಾಡಾನೆ ದಂತದಿಂದ ಗುದ್ದಿ ಜಖಂಗೊಳಿಸಿದ ಘಟನೆ ಬೆಳಕಿಗೆ ಬಂದಿದೆ.
ಬೆಟ್ಟದ ಕಾಡು ನಿವಾಸಿ ಹೆಚ್.ಟಿ. ಸುನಿಲ್ ಅವರಿಗೆ ಸೇರಿದ ಆಟೋ ಮೇಲೆ ಈ ದಾಳಿ ನಡೆದಿದ್ದು, ಪರಿಣಾಮವಾಗಿ ವಾಹನಕ್ಕೆ ಭಾರೀ ಹಾನಿಯಾಗಿದೆ. ಗ್ರಾಮದ ಸತ್ಯನಾರಾಯಣ ದೇವಾಲಯದ ಸುತ್ತಮುತ್ತ ಹಾಗೂ ಎಂ.ಜಿ. ಕಾಲೋನಿ ಪ್ರದೇಶದಲ್ಲಿ ಸಂಚರಿಸಿದ ಸಲಗ ಕಾಫಿ ತೋಟಗಳೊಳಗೂ ನುಗ್ಗಿ ದಾಂಧಲೆ ನಡೆಸಿದೆ.
ಸಲಗನನ್ನು ಕಂಡ ಗ್ರಾಮಸ್ಥರು ಭೀತಿಯಿಂದ ದಿಕ್ಕಾಪಾಲಾಗಿ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಬಗ್ಗೆ ಗ್ರಾಮಸ್ಥರು ಾರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಕಾರ್ಯಾಚರಣೆಗಿಳಿದ ಅರಣ್ಯ ಸಿಬ್ಬಂದಿ ಡ್ರೋನ್ ಕ್ಯಾಮೆರಾ ಬಳಸಿ ಆನೆಯನ್ನು ಪತ್ತೆಹಚ್ಚಿ, ಮರಳಿ ಕಾಡಿನತ್ತ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ.
ʼಇದನ್ನೂ ಓದಿ : ಕಬಿನಿ ಕಾಡಲ್ಲಿ ಹುಲಿ ಮರಿಗಳ ಕಲರವ : ತಾಯಿಯೊಂದಿಗೆ ಮಕ್ಕಳ ತುಂಟಾಟ



















