ಹಾಸನ: ಖಾಸಗಿ ಬಸ್ ತಡೆದು ಲಾಂಗ್ ತೋರಿಸಿ, ಬೆದರಿಕೆ ಹಾಕಿದ್ದ ಪುಡಿ ರೌಡಿಯ ಕಾಲಿಗೆ ಗುಂಡೇಟು ಹಾಕಿರುವ ಘಟನೆ ನಡೆದಿದೆ.
ಬೆಂಗಳೂರಿನಿಂದ ಮಂಗಳೂರಿಗೆ (Bengaluru to Mangaluru) ಬರುತ್ತಿದ್ದ ಖಾಸಗಿ ಬಸ್ (Private Bus) ತಡೆದು ಲಾಂಗ್ ತೋರಿಸಿದ್ದ ಪುಡಿ ರೌಡಿಯ ಕಾಲಿಗೆ ಶಾಂತಿಗ್ರಾಮದ ಬಳಿ ಪೊಲೀಸರು ಗುಂಡೇಟು ನೀಡಿದ್ದಾರೆ.
ಒಂದು ಕೊಲೆ, ಮೂರು ಕೊಲೆ ಯತ್ನ ಪ್ರಕರಣಗಳ ಆರೋಪಿಯಾಗಿರುವ ಮನು (23) ಎಂಬಾತನೇ ರೌಡಿಸಂ ಮಾಡಿದ್ದ. ಆತನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದ ಪೊಲೀಸರು ಹಾಸನಕ್ಕೆ ಕರೆದುಕೊಂಡು ಹೋಗುತ್ತಿದ್ದರು.
ಈ ವೇಳೆ ಮೂತ್ರ ವಿಸರ್ಜನೆಗೆಂದು ವಾಹನ ಇಳಿದು, ಪೊಲೀಸರ ಮೇಲೆಯೇ ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಹೀಗಾಗಿ ಆತ್ಮರಕ್ಷಣೆಗಾಗಿ ಹಾಸನ ನಗರ ಠಾಣೆ ಇನ್ಸ್ ಪೆಕ್ಟರ್ ಮೋಹನ್ ಕೃಷ್ಣ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬಂಧಿತ ಆರೋಪಿ ದೇವರಾಯಪಟ್ಟಣದ ಬಳಿ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ತಡೆದು ಗಲಾಟೆ ಮಾಡಿ ಬಸ್ಸಿನ ಗ್ಲಾಸ್ ನ್ನು ಒಡೆದು ಹಾಕಿದ್ದ. ಮನುವಿನ ಹುಚ್ಚಾಟ ಮೊಬೈಲ್ ನಲ್ಲಿ ಸೆರೆಯಾಗಿತ್ತು. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.