ನವದೆಹಲಿ: ದೇಶದ ಬಡವರಿಗೆ ಆರೋಗ್ಯ ಭದ್ರತೆ ಸಿಗಲಿ ಎಂದು ಕೇಂದ್ರ ಸರ್ಕಾರವು 2018ರಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ತಂದಿದೆ. ದೇಶದ ಕೋಟ್ಯಂತರ ಕುಟುಂಬಗಳಿಗೆ ವರ್ಷಕ್ಕೆ 5 ಲಕ್ಷ ರೂ. ವಿಮಾ ಸುರಕ್ಷಾ ಯೋಜನೆಗೆ ಕೋಟ್ಯಂತರ ಜನ ನೋಂದಣಿ ಮಾಡಿಕೊಂಡಿದ್ದಾರೆ. ಅಲ್ಲದೆ, ಕೆಲ ತಿಂಗಳ ಹಿಂದಷ್ಟೇ ಆಯುಷ್ಮಾನ್ ಭಾರತ್ ಯೋಜನೆಗೆ 70 ವರ್ಷ ದಾಟಿದ ಹಿರಿಯರನ್ನೂ ಸೇರಿಸಲಾಗಿದೆ. ಇಷ್ಟಾದರೂ ಆಯುಷ್ಮಾನ್ ಭಾರತ್ ಯೋಜನೆ ಅನ್ವಯ ಕೆಲ ರೋಗಗಳಿಗೆ ಚಿಕಿತ್ಸೆ ಇಲ್ಲ ಎಂಬುದನ್ನು ಸಾರ್ವಜನಿಕರು ಗಮನಿಸಬೇಕಿದೆ.
ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇಲ್ಲದ ಜ್ವರ, ನೆಗಡಿ ಇತ್ಯಾದಿ ಸಾಮಾನ್ಯ ಸಮಸ್ಯೆಗೆ ಒಪಿಡಿಯಲ್ಲಿ ಪಡೆಯಲಾಗುವ ರೆಗ್ಯುಲರ್ ಟ್ರೀಟ್ಮೆಂಟ್ಗೆ ಇನ್ಷೂರೆನ್ಸ್ ಕವರೇಜ್ ಇರುವುದಿಲ್ಲ. ಕೆಲವೊಮ್ಮೆ ಆಸ್ಪತ್ರೆಯಲ್ಲಿ ರೋಗಿಯನ್ನು ದಾಖಲು ಮಾಡಿಕೊಂಡು ಸಂಪೂರ್ಣ ತಪಾಸಣೆ ಮಾಡಿ, ವಿಟಮಿನ್ ಇತ್ಯಾದಿ ಟಾನಿಕ್ಗಳನ್ನು ಕೊಟ್ಟು ಡಿಸ್ಚಾರ್ಜ್ ಮಾಡುವುದುಂಟು. ಇಂಥ ಟ್ರೀಟ್ಮೆಂಟ್ ಅಥವಾ ವೆಚ್ಚಕ್ಕೆ ಆಯುಷ್ಮಾನ್ ಭಾರತ್ ಇನ್ಷೂರೆನ್ಸ್ ಕವರೇಜ್ ಇರುವುದಿಲ್ಲ.
ಹೆಚ್ಚಿನ ದಂತ ಚಿಕಿತ್ಸೆಗಳು ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯ ವಿಮಾ ವ್ಯಾಪ್ತಿಗೆ ಬರುವುದಿಲ್ಲ. ಸಂತಾನಹೀನತೆಯ ಸಮಸ್ಯೆ, ಲಸಿಕೆ ಯೋಜನೆ, ಸೌಂದರ್ಯವರ್ದಕ ಕಾಸ್ಮೆಟಿಕ್ ಸರ್ಜರಿ, ಶಿಶುಗಳ ಶಿಶ್ನ ಚರ್ಮ ತೆಗೆಯುವಿಕೆ, ಕೃತಕ ಉಸಿರಾಟದಲ್ಲಿರುವವರಿಗೆ ಇನ್ಷೂರೆನ್ಸ್ ಕವರೇಜ್ ಸಿಗುವುದಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಹಾಗಾಗಿ, ಜನರು ಆಸ್ಪತ್ರೆಗೆ ದಾಖಲಾಗುವ ಮೊದಲು ಇವುಗಳನ್ನು ಗಮನಿಸಬೇಕಿದೆ.
ಯಾವುದಕ್ಕೆಲ್ಲ ಅನ್ವಯ?
ಆಯುಷ್ಮಾನ್ ಭಾರತ್ ಯೋಜನೆ ಅನ್ವಯ ಹಲವು ಚಿಕಿತ್ಸೆಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. ಕ್ಯಾನ್ಸರ್, ಕಿಡ್ನಿ ಕಸಿ, ಸುಟ್ಟ ಗಾಯಗಳು, ತಾಯಿ ಮತ್ತು ಮಕ್ಕಳ ಆರೈಕೆ, ಮೂಳೆ ಶಸ್ತ್ರಚಿಕಿತ್ಸೆಗಳು, ಮೂಳೆ ಮಜ್ಜೆಯ ಕಸಿ ಸೇರಿ ಹಲವು ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಇದೆ.



















