ಮೈಸೂರು : ಸರ್ಕಾರವು ಈಗಾಗಲೇ ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಜನಗಣತಿ ಸಮೀಕ್ಷೆ ನಡೆಸುತ್ತಿದ್ದು, ಸರ್ಕಾರಿ ಸಿಬ್ಬಂದಿಯನ್ನು ಬಳಸಿಕೊಂಡು ಈ ಸಮೀಕ್ಷೆ ಮಾಡುತ್ತಿದ್ದಾರೆ. ಆದರೆ ಕೆಲವೆಡೆ ಗಣತಿದಾರರ ಕೊರತೆ ಕೂಡ ಕಂಡು ಬರುತ್ತಿದೆ. ಈ ಹಿನ್ನಲೆಯಿಂದ ಸಿಎಂ ಸಿದ್ದರಾಮಯ್ಯ ಅವರ ತವರಿನಲ್ಲೇ ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿರುವ ಸುದ್ದಿ ಬೆಳಕಿಗೆ ಬಂದಿದೆ.
ಮೈಸೂರಿನ ದೇವರಾಜ ಅರಸು ರಸ್ತೆಯ ಪಕ್ಕದಲ್ಲಿರುವ ದೇವರಾಜ ಶಾಲೆಯ ಆಸುಪಾಸಿನಲ್ಲಿ ಕಾಲೇಜು ವಿದ್ಯಾರ್ಥಿಗಳು ಸಮೀಕ್ಷೆ ನಡೆಸುತ್ತಿರುವ ವಿಚಾರ ಸಾರ್ವಜನಿಕರು ಬಹಿರಂಗ ಪಡಿಸಿದ್ದಾರೆ. ಮನೆಗೆ ಸಮೀಕ್ಷೆ ನಡೆಸಲು ಬಂದ ಯುವಕರನ್ನೇ ಜನರು ಪ್ರಶ್ನಿಸಿದ್ದು, ಸರ್ಕಾರಿ ಅಧಿಕಾರಿಗಳು ಇಲ್ಲ, ಸಿಬ್ಬಂದಿಗಳು ಬರಬೇಕು ನೀವು ಯಾಕೆ ಬಂದಿದ್ದೀರಿ ನಿಮ್ಮ ಮೊಬೈಲ್ ನಲ್ಲಿ ಏಕೆ ಸಮೀಕ್ಷೆ ಆ್ಯಪ್ ಇದೆ ಎಂದು ಜನರು ಕೇಳಿದ್ದಕ್ಕಾಗಿ ಉತ್ತರ ನೀಡಲಾಗದೇ ತಡಬಡಿಸಿದ್ದಾರೆ ಎನ್ನಾಲಾಗುತ್ತಿದೆ.
ಈ ವಿದ್ಯಾರ್ಥಿಗಳು ಮಹಾರಾಜ ಕಾಲೇಜಿನವರು ಎಂದು ತಿಳಿದುಬಂದಿದೆ. ಸಮೀಕ್ಷೆಯಲ್ಲಿ ತೊಡಗಿರುವುದನ್ನು ಮೊಬೈಲ್ ನಲ್ಲಿ ಸೆರೆ ಹಿಡಿದ ಸ್ಥಳೀಯ ನಿವಾಸಿಗಳು ಇದೆಂತಹ ಸಮೀಕ್ಷೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.