ನಿರ್ದೇಶಕ, ನಟ ಉಪೇಂದ್ರ ಅವರು ‘ಉಪ್ಪಿ 2’ ನಂತರ ನಿರ್ದೇಶಕನಾಗಿ ಉಪೇಂದ್ರ ‘ಯುಐ’ ಸಿನಿಮಾವನ್ನು ತೆರೆಗೆ ತಂದಿದ್ದಾರೆ. ಸಿನಿಮಾ ಘೋಷಣೆ ಆದಾಗಿನಿಂದ ಟೈಟಲ್, ಕಂಟೆಂಟ್ ಎಲ್ಲದರ ಬಗ್ಗೆಯೂ ಕುತೂಹಲವಿತ್ತು. ಅದರಂತೆ ಈಗ ಚಿತ್ರ ಜನರನ್ನು ತಲುಪಿದೆಯೇ ಎಂಬುವುದು ಚರ್ಚಿತ ವಿಷಯವಾಗಿದೆ.
ಉಪೇಂದ್ರ ಅವರು ‘ಎ’ ಸಿನಿಮಾ ಮಾಡಿದಾಗ, ಅದರ ಪೋಸ್ಟರ್‌ನಲ್ಲಿ ‘ಇದು ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ’ ಎಂದು ಹೇಳಿದ್ದರು. ಆದರೆ, ಈಗ ‘ಯುಐ’ ಸಿನಿಮಾ ಶುರುವಾಗುವ ಮುನ್ನವೇ “ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಎದ್ದೋಗಿ..” ಎಂಬ ಲೈನ್‌ನೊಂದಿಗೆ ವೀಕ್ಷಕರಿಗೆ ಹುಳ ಬಿಡಲು ಯತ್ನಿಸಿದ್ದಾರೆ. ಸಮಾಜಕ್ಕೆ ಉಪದೇಶಗಳನ್ನೇ ಪ್ರಮುಖವಾಗಿಸಿಕೊಂಡಿರುವ ಚಿತ್ರ ಯುಐ. ಹೀಗಾಗಿ ಹಲವು ಕಥೆಗಳು ಸೇರಿ ಒಂದು ಯುಐ ಆಗಿದೆ. ಇಲ್ಲಿ ಕಥೆಗಿಂತ ಚಿತ್ರಕಥೆಯೇ ಪ್ರಮುಖವಾಗಿದೆ.
ಬಡವರಿಗೆ ಶ್ರೀಮಂತರ ಸಂಪತ್ತನ್ನು ಕಿತ್ತು ಹಂಚಬೇಕು. ಸಮಾಜದಲ್ಲಿ ರಾಜಕಾರಣಿಗಳು ಶ್ರೀಮಂತರಾಗುವುದೇ ಬಡವರ ದುಡ್ಡಿನಿಂದ. ನಾವು ಅವರ ದಾಸ್ಯದಿಂದ ಹೊರಬರಬೇಕು, ಸಾಮಾನ್ಯರು ಶ್ರೀಮಂತರನ್ನು ಆಳುವಂತಾಗಬೇಕು ಎಂಬ ತಮ್ಮ ಹಿಂದಿನ ಸಿನಿಮಾಗಳ ಸಂದೇಶವನ್ನೇ ಉಪೇಂದ್ರ ಮತ್ತೆ ‘ಯುಐ’ನಲ್ಲಿ ಪುನರುಚ್ಚರಿಸಿದ್ದಾರೆ. ಆದರೆ ಅದನ್ನು ಹೇಳಿಕೊಂಡು ಹೋದ ರೀತಿ, ಅದಕ್ಕಾಗಿ ಸೃಷ್ಟಿಸಿದ ಜಗತ್ತು ಭಿನ್ನವಾಗಿದೆ.
ಉಪೇಂದ್ರ ಅವರ ‘ಎ’, ‘ಸೂಪರ್’ ಸಿನಿಮಾಗಳ ಒಂದಷ್ಟು ಅಂಶಗಳು ಇಲ್ಲಿಯೂ ಮರುಕಳಿಸುತ್ತವೆ. ಅದರಲ್ಲಿಯೂ ‘ಎ’ ಸಿನಿಮಾದ ದೃಶ್ಯಗಳು, ಅಲ್ಲಿ ಬಳಸಿದ್ದ ತಂತ್ರಗಳು ಇಲ್ಲಿಯೂ ಕಾಣಸಿಗುತ್ತದೆ. ‘ಎ’ ಸಿನಿಮಾದಲ್ಲಿ ಪೋಷಕರನ್ನು ಉಪ್ಪಿ ಶೂಟ್ ಮಾಡಿ ಸಾಯಿಸುತ್ತಾರೆ. ಅಪ್ಪ-ಅಮ್ಮನನ್ನು ಕಳೆದುಕೊಂಡ ಮಗು ಅಳುತ್ತ ನಿಂತಿರುತ್ತಾನೆ. ಆಗ ಉಪೇಂದ್ರ, “ಹೋಗು ಈ ಪ್ರಪಂಚ ವಿಶಾಲವಾಗಿದೆ..” ಎಂದು ಹೇಳುತ್ತಾರೆ. ಅಳುತ್ತಿದ್ದ ಮಗು, ಅಲ್ಲಿಂದ ಓಡಿ ಹೋಗುತ್ತಾನೆ. ಆಗ ಉಪೇಂದ್ರ, “ಇವ್ನು ಓಡೋ ಸ್ಪೀಡ್ ನೋಡಿದ್ರೆ ಮುಂದೆ ಸುಭಾಷ್ ಚಂದ್ರ ಬೋಸ್ ಆಗ್ತಾನೆ” ಅಂತ ಹೇಳ್ತಾರೆ. ‘ಯುಐ’ ಸಿನಿಮಾದಲ್ಲೂ ಅದೇ ರೀತಿ ಅಳುತ್ತಾ ನಿಲ್ಲುವ ಒಂದು ಮಗುವಿಗೆ ಉಪ್ಪಿ ಓಡು ಎಂದು ಹೇಳುತ್ತಾರೆ. ಮಗು ಓಡಿಹೋಗುತ್ತದೆ. ಆಗ ಉಪೇಂದ್ರ, “ಇವ್ನು ಓಡೋ ಸ್ಪೀಡ್ ನೋಡಿದ್ರೆ ಮುಂದೆ ಒಸಮಾ ಬಿನ್ ಲಾಡೆನ್, ದಾವೂದ್ ಇಬ್ರಾಹಿಂ ಆಗ್ತಾನೆ..” ಅಂತ ಹೇಳ್ತಾರೆ. ದೇವರ ಕುರಿತಾಗಿನ ನಿಲುವುಗಳು ಕೂಡ ಎರಡೂ ಚಿತ್ರದಲ್ಲಿಯೂ ಒಂದೇ ರೀತಿಯಿದೆ.
ಅಷ್ಟಾಗಿಯೂ ‘ಯುಐ’ ಕಥೆ ಇಷ್ಟೇ ಎನ್ನಲು ಸಾಧ್ಯವಿಲ್ಲ. ಮನುಷ್ಯ ಪ್ರಕೃತಿಯನ್ನು ಹಾಳುಗೆಡುವುತ್ತಿರುವುದರಿಂದ ಹಿಡಿದು ಒಳಿತು, ಕೆಡುಕುಗಳವರೆಗೆ ಸಾಕಷ್ಟು ಅಂಶಗಳು ಚಿತ್ರದಲ್ಲಿ ಕಾಣಸಿಗುತ್ತದೆ. ಕಥೆಗಿಂತ ಹೆಚ್ಚಾಗಿ ಚಿತ್ರಕಥೆಯನ್ನು ಪ್ರಮುಖವಾಗಿಸಿಕೊಂಡಿರುವ ಚಿತ್ರವಿದು.
ಅದೊಂದು ವಿಚಿತ್ರ ಲೋಕ. ಮಿದುಳು ಹೊಂದಿರುವವರ ಲೋಕವದು ಎಂಬುದನ್ನು ಉಪೇಂದ್ರ ಸೂಚ್ಯವಾಗಿ ಹೇಳಿದ್ದಾರೆ. ಅಲ್ಲಿ ಸತ್ಯ ಮತ್ತು ಕಲ್ಕಿಯಾಗಿ ದ್ವಿಪಾತ್ರದಲ್ಲಿ ಉಪೇಂದ್ರ ಬರುತ್ತಾರೆ. ಕಲ್ಕಿ ಖಳನಟನಾಗಿ ಜಗತ್ತನ್ನು ಬದಲಿಸಲು ಹೊರಟವನಾದರೆ, ಸತ್ಯ ಬುದ್ಧನಾಗಿ ಜಗತ್ತನ್ನು ಕಟ್ಟಲು ಹೊರಟವನು. ಕಲ್ಕಿ ಮನುಷ್ಯನ ಬಾಹ್ಯ ರೂಪದ ಪ್ರತೀಕವಾದರೆ, ಸತ್ಯ ಮನುಷ್ಯನ ಆಂತರಿಕ ರೂಪ ಎಂಬುದನ್ನು ಒಂದುಕಡೆ ಹೇಳುತ್ತಾರೆ. ಅವರಿಬ್ಬರ ನಡುವಿನ ಸಂಘರ್ಷದ ಜೊತೆ ಕಥೆ ಸಾಗುತ್ತದೆ.
ತಿರುಗುಮುರುಗ ಹೇಳಿದರೂ ‘ಯುಐ’ ಸಿನಿಮಾದ ಕಥೆಯನ್ನು ಸರಳವಾಗಿ ಹೇಳುವುದಕ್ಕೆ ಆಗೋದಿಲ್ಲ. ಅಷ್ಟೊಂದು ಸುರಳಿ ಸುರಳಿಯಾಗಿದೆ ಉಪೇಂದ್ರ ಬರವಣಿಗೆ. ಆದರೆ ಹಿಂದಿನ ಸಿನಿಮಾಗಳಷ್ಟು ತಲೆಗೆ ಹುಳ ಬಿಡದೇ ನೇರವಾಗಿ ಆಲೋಚನೆಗೆ ಬಿಡುವ ಕಸರತ್ತು ಇಲ್ಲಿದೆ.
ರಾಜನಾಗಿದ್ದ ರವಿಶಂಕರ್ ಅವರನ್ನು ಕುರ್ಚಿಯಿಂದ ಕೆಳಗಿಳಿಸುವುದು, ಅದರ ನಂತರದ ಆ ಸಾಮ್ರಾಜ್ಯವೇ ಒಟ್ಟಾರೆ ಚಿತ್ರಕಥೆ. ಇದಕ್ಕಾಗಿ ನಿರ್ದೇಶಕರು ಸೃಷ್ಟಿಸಿದ ಜಗತ್ತು ಬಹಳ ಮಜವಾಗಿದೆ. ಕಥೆ ಹೇಳಿಕೊಂಡು ಹೋದ ರೀತಿ, ಅದನ್ನು ದೃಶ್ಯವಾಗಿಸಿರುವುದು ಎಲ್ಲವೂ ಕೆಲವು ಕಡೆ ಭಿನ್ನಲೋಕಕ್ಕೆ ಹೋದ ಅನುಭವ ನೀಡುತ್ತದೆ. ಚಿತ್ರದ ಗ್ರಾಫಿಕ್ಸ್, ಉಪೇಂದ್ರ ನಟನೆ, ಹಿನ್ನೆಲೆ ಸಂಗೀತ ಎಲ್ಲವೂ ಚಿತ್ರವನ್ನು ಮತ್ತೊಂದು ಎತ್ತರಕ್ಕೆ ಕರೆದುಕೊಂಡು ಹೋಗಿದೆ. ಆದರೆ ಇಡೀ ಚಿತ್ರವನ್ನು ಉಪದೇಶವಾಗಿಸಿರುವುದು, ಪ್ರಜಾಕೀಯದ ಪ್ರಣಾಳಿಕೆಗಳನ್ನೇ ಚಿತ್ರಕಥೆಯಲ್ಲಿ ತುರುಕಿರುವುದು ಮನರಂಜನೆಗಿಂತ ಹೆಚ್ಚು ಉಪದೇಶದಂತೆ ಭಾಸವಾಗಿಸುತ್ತದೆ!