ಯಾದಗಿರಿ: ಪ್ರಾಮಾಣಿಕ ಪೊಲೀಸ್ ಅಧಿಕಾರಿಯೊಬ್ಬರು ಹೃದಯಾಘಾತಕ್ಕೆ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಶುಕ್ರವಾರ ಸಂಜೆ ಯಾದಗಿರಿಯ ಪೊಲೀಸ್ ಕ್ವಾಟರ್ಸ್ ನಲ್ಲಿ ಈ ಘಟನೆ ನಡೆದಿದೆ. ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಶುರಾಮ ಹೃದಯಾಘಾತಕ್ಕೆ ಬಲಿಯಾಗಿರುವ ಅಧಿಕಾರಿ. ಪರಶುರಾಮ್ ಅವರನ್ನು ಶುಕ್ರವಾರವಷ್ಟೇ ಯಾದಗಿರಿ ಸೈಬರ್ ಕ್ರೈಮ್ ಗೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಗುರುವಾರ ನಗರ ಠಾಣೆಯಲ್ಲಿನ ಸಿಬ್ಬಂದಿ ಪ್ರಾಮಾಣಿಕ ಅಧಿಕಾರಿಗೆ ಹೂವಿನ ಸುರಿಮಳೆಗೈದು ಬೀಳ್ಕೊಟ್ಟಿದ್ದರು. ಆದರೆ, ಶುಕ್ರವಾರ ರಾತ್ರಿ ಏಕಾಏಕಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಮೂಲತಃ ಕೊಪ್ಪಳ ಜಿಲ್ಲೆಯವರಾದ ಪರಶುರಾಮ್ 2017 ಬ್ಯಾಚ್ ನಲ್ಲಿ ಪಿಎಸ್ ಐ ಆಗಿ ಆಯ್ಕೆಯಾಗಿದ್ದರು. ಯಾದಗಿರಿ ಜಿಲ್ಲೆಯಲ್ಲಿ ಪಿಎಸ್ ಐ ಆಗಿ ಉತ್ತಮ ಸೇವೆ ಸಲ್ಲಿಸಿ, ಜನರ ಮನಸ್ಸು ಗೆದ್ದಿದ್ದರು. ಆದರೆ, ಹೃದಯಾಘಾತಕ್ಕೆ ಬಲಿಯಾಗಿದ್ದು, ಜನರು ಹಾಗೂ ಪೊಲೀಸ್ ಸಿಬ್ಬಂದಿ ಕಂಬನಿ ಮಿಡಿಯುತ್ತಿದ್ದಾರೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಅನುಮಾನಗಳನ್ನು ಅವರ ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ.
ನನ್ನ ಪತಿಯ ಸಾವಿಗೆ ಸ್ಥಳೀಯ ಶಾಸಕ ಚೆನ್ನಾರೆಡ್ಡಿಗೌಡ ಹಾಗೂ ಪುತ್ರ ಸನ್ನಿ ಕಾರಣ ಎಂದು ಪಿಎಸ್ ಐ ಪತ್ನಿ ಆರೋಪಿಸಿದ್ದಾರೆ. ನನ್ನ ಗಂಡನ ಸಾವಿಗೆ ಅವರೇ ಕಾರಣ. ಬರೀ ಲಂಚ ಕೇಳ್ತಾರೆ. ನನ್ನ ಗಂಡನ ಪ್ರಾಮಾಣಿಕತೆ ಇವರಿಗೆ ಇಷ್ಟವಾಗುತ್ತಿರಲಿಲ್ಲ. ಹೀಗಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ನನ್ನ ಪತಿಯ ಸಾವು ಅನುಮಾನ ಮೂಡಿಸುತ್ತಿದೆ. ಹೀಗಾಗಿ ಸೂಕ್ತ ತನಿಖೆಯಾಗಬೇಕು. ಶಾಸಕರು ಹಾಗೂ ಆತನ ಮಗನ ವಿರುದ್ಧ ದೂರು ಸಲ್ಲಿಸುತ್ತೇನೆ ಎಂದು ಪತ್ನಿ ಶ್ವೇತಾ ಗೋಳಾಡಿದ್ದಾರೆ.