ಯಾದಗಿರಿ: ಪಿಎಸ್ ಐ ಪರಶುರಾಮ್ ಹೃದಯಾಘಾತಕ್ಕೆ ಬಲಿಯಾಗಿರುವ ಪ್ರಕರಣವನ್ನು ಈಗಾಗಲೇ ಸಿಐಡಿಗೆ ವಹಿಸಿ ಸರ್ಕಾರ ಆದೇಶ ಹೊರಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಕೂಡ ದಾಖಲಿಸಿಕೊಳ್ಳಲಾಗಿದೆ.
ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹಾಗೂ ಅವರ ಪುತ್ರ ಪಂಪನಗೌಡ 30 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟು, ಜಾತಿ ನಿಂದನೆ ಮಾಡಿರುವುದರಿಂದಾಗಿ ಪತಿ ಪಿಎಸ್ ಐ ಪರಶುರಾಮ್ ಖಿನ್ನತೆಗೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ಅವರ ಪತ್ನಿ ಶ್ವೇತಾ ಆರೋಪಿಸಿದ್ದಾರೆ. ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್ಸಿ ಜಾತಿಗೆ ಸೇರಿದವರಾದ ಪರಶುರಾಮ್(34) ಶುಕ್ರವಾರ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಪಿಎಸ್ ಐ ಸಾವಿನ ಪ್ರಕರಣ ಮಾತ್ರ ತೀವ್ರ ತಿರುವು ಪಡೆದುಕೊಂಡಿದೆ. ಅವರ ಕುಟುಂಬಸ್ಥರು ಹಾಗೂ ಸಮುದಾಯದವರು ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಪರಶುರಾಮ್ ಕಳೆದ 7 ತಿಂಗಳುಗಳಿಂದ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಮತ್ತೆ ಅವರನ್ನು ಸೆನ್ ಠಾಣೆಗೆ ವರ್ಗಾವಣೆ ಮಾಡಿದ್ದರು. ನಗರ ಠಾಣೆಯಲ್ಲಿ ಮುಂದುವರೆಯಲು 30 ಲಕ್ಷ ರೂ. ನೀಡುವಂತೆ ಶಾಸಕರು ಹಾಗೂ ಅವರ ಪುತ್ರ ಬೇಡಿಕೆ ಇಟ್ಟಿದ್ದರು. ಇದರಿಂದ ಮನನೊಂದು ತೀವ್ರ ಆತಂಕಕ್ಕೆ ಒಳಗಾಗಿದ್ದರು ಎಂದು ಪತ್ನಿ ಶ್ವೇತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹೀಗಾಗಿ ಪಿಎಸ್ ಐ ಪರಶುರಾಮ್ ಸಾವಿಗೆ ಕಾರಣರಾದ ಶಾಸಕರು ಹಾಗೂ ಅವರ ಪುತ್ರನ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕುಟುಂಬದವರು ಒತ್ತಾಯಿಸಿದ್ದರು. ಆದರೆ, ಪೊಲೀಸ್ ಇಲಾಖೆಯಿಂದ ಸ್ಪಂದನೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಸುಮಾರು ಆರೇಳು ಗಂಟೆ ರಸ್ತೆ ನಡೆಸಿದ್ದರು. ಪ್ರತಿಭಟನಾಕಾರರು ಕೂಡ ಶಾಸಕರು ಹಾಗೂ ಅವರ ಪುತ್ರ ಲಕ್ಷಾಂತರ ರೂ. ಬೇಡಿಕೆ ಇಟ್ಟಿದ್ದರಿಂದಾಗಿ ಒತ್ತಡಕ್ಕೆ ಒಳಗಾಗಿ ಪರಶುರಾಮ್ ಜೀವ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದ್ದರು.
ಶ್ವೇತಾ ದೂರು ನೀಡಿದ ಹಿನ್ನೆಲೆಯಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಮೊದಲನೇ ಆರೋಪಿ ಹಾಗೂ ಅವರ ಪುತ್ರ ಪಂಪನಗೌಡ ಎರಡನೇ ಆರೋಪಿ ಎಂದು ನಮೂದಿಸಿ ನಗರ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣ ದಾಖಲಾಗುತ್ತಿದ್ದಂತೆ ಶಾಸಕ ಹಾಗೂ ಅವರ ಮಗನ ಮೊಬೈಲ್ ಫೋನ್ ಗಳು ಸ್ವಿಚ್ಡ್ ಆಫ್ ಆಗಿವೆ. ಹೀಗಾಗಿ ಬಂಧನ ಭೀತಿಯಿಂದ ತಲೆ ಮರೆಸಿಕೊಂಡಿರುವ ಸಾಧ್ಯತೆ ಇದೆ.
ಈಗಾಗಲೇ ಪ್ರಕರಣದ ತನಿಖೆ ನಡೆಸಲು ಡಿವೈಎಸ್ಪಿ ಜಾವೇದ್ ಇನಾಮ್ದಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಕೂಡಲೇ ಆರೋಪಿಗಳನ್ನು ಬಂಧಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸರ್ಕಾರ ಕೂಡ ಪ್ರಕರಣವನ್ನು ಸಿಐಡಿಗೆ ವಹಿಸಿದೆ.