ಮಂಗಳೂರು | ಕಳೆದ ವರ್ಷ ಬಜ್ಪೆಯಲ್ಲಿ ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಫೋಟೋ ಇರುವ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ, ಉಳ್ಳಾಲದ ಮಸೀದಿಯ ಬಳಿ ಬಾಂಬ್ ಸ್ಫೋಟಿಸುವುದಾಗಿ ಪ್ರಚೋದನಕಾರಿ ಕಾಮೆಂಟ್ ಹಾಕಿದ್ದ ದುಷ್ಕರ್ಮಿಯ ವಿರುದ್ಧ ಉಳ್ಳಾಲ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಶಂಕರ್11916’ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಚೋದನಕಾರಿ ಸಂದೇಶವೊಂದನ್ನು ಪೋಸ್ಟ್ ಮಾಡಲಾಗಿದೆ. ಈ ಖಾತೆಯಲ್ಲಿ ‘ಸಪೋರ್ಟ್ ಮಾಡಿ ಬ್ರೋ ಉಳ್ಳಾಲ ಮಸೀದಿ ಹತ್ರ ಬಾಂಬ್ ಬ್ಲಾಸ್ಟ್ ಮಾಡ್ತೀನಿ’ ಎಂದು ಸಂದೇಶ ಹಾಕಲಾಗಿತ್ತು. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು.
ಸೋಮವಾರ ಸಾಮಾಜಿಕ ಜಾಲತಾಣದ ಮೋನಿಟರಿಂಗ್ ಕರ್ತವ್ಯ ನಿರ್ವಹಿಸುತ್ತಿದ್ದ ಉಳ್ಳಾಲ ಪೊಲೀಸ್ ಠಾಣೆಯ ಸಿಬ್ಬಂದಿ ಸಂತೋಷ್ ದೊಡ್ಡಮನಿ ಅವರು ಈ ಸಂದೇಶವನ್ನು ಗಮನಿಸಿದ್ದು, ಘಟನೆ ಕುರಿತು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯು ಧರ್ಮಗಳ ನಡುವೆ ದ್ವೇಷವನ್ನು ಸೃಷ್ಟಿಸುವ ಉದ್ದೇಶ ಹೊಂದಿದ್ದಾನೆ. ಹಿಂಸಾಚಾರವನ್ನು ಪ್ರಚೋದಿಸಲು ಮತ್ತು ಜನರನ್ನು ಎತ್ತಿಕಟ್ಟಲು ಈ ಪೋಸ್ಟ್ ಮಾಡಲಾಗಿದೆ. ಹೀಗಾಗಿ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.
“ಈ ಸಂದೇಶ ಹಾಕಿದ ವ್ಯಕ್ತಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು” ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅವರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಂತಹ ಸಂದೇಶ ಹರಡಿದ ದುಷ್ಕರ್ಮಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್ ಕೂಡ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ರಶ್ಮಿಕಾ-ವಿಜಯ್ ಅದ್ದೂರಿ ‘ಸಂಗೀತ್’ ಸಂಭ್ರಮ.. ಕಣ್ಮನ ಸೆಳೆಯುವ ಫೋಟೋಸ್ ವೈರಲ್



















