ಬೆಂಗಳೂರು : ತಮಿಳುನಾಡಿನ ರೀತಿ ಕರ್ನಾಟಕದ ಹದಿಹರೆಯದ ಹೆಣ್ಣುಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ತಡೆಗೆ ಉಚಿತ ಲಸಿಕೆ ನೀಡಬೇಕೆಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಹೆಣ್ಣುಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್‌ಗೆ ಕಾರಣವಾಗುವ ಎಚ್.ಪಿ.ವಿ ವೈರಸ್ ಹರಡದಂತೆ ಉಚಿತ ಲಸಿಕೆ ನೀಡುವ ಮೂಲಕ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ತಮಿಳುನಾಡಿನ ರಾಜ್ಯದಲ್ಲಿ ಹದಿಹರೆಯದ ಹೆಣ್ಣುಮಕ್ಕಳಿಗೆ ಉಚಿತ ಲಸಿಕೆ ನೀಡಲಾಗುತ್ತಿದೆ.
ಅದೇ ರೀತಿಯಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲೂ ಸಹ ಗರ್ಭಕಂಠ ಕ್ಯಾನ್ಸರ್‌ಗೆ ಕಾರಣವಾಗುವ ಈ ವೈರಸ್ ತಡೆಗಟ್ಟುವಲ್ಲಿ ಮಹಿಳೆಯರಿಗೆ ಉಚಿತವಾಗಿ ಲಸಿಕೆಯನ್ನು ನೀಡಿ, ಅವರಲ್ಲಿ ಕ್ಯಾನ್ಸರ್ ತಡೆಗಟ್ಟಲು ನೆರವಾಗಬೇಕೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ನಾಗಲಕ್ಷ್ಮೀ ಚೌಧರಿ ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಏನಿದು ಗರ್ಭಕಂಠದ ಕ್ಯಾನ್ಸರ್?
ಮಹಿಳೆಯರಲ್ಲಿ ಕಂಡು ಬರುವ ಮಾರಣಾಂತಿಕ ಕ್ಯಾನ್ಸರ್ಗಳಲ್ಲಿ ಒಂದಾಗಿರುವ ಈ ಗರ್ಭ ಕಂಠದ ಕ್ಯಾನ್ಸರ್ ಜಗತ್ತಿನಲ್ಲಿ ತಡೆಗಟ್ಟಬಹುದಾದ ನಾಲ್ಕನೇ ಕ್ಯಾನ್ಸರ್ ಆಗಿದೆ. ಭಾರತದಲ್ಲಿ ಮಹಿಳೆಯರಲ್ಲಿ ಕಂಡು ಬರುತ್ತಿರುವ ಎರಡನೇ ಕ್ಯಾನ್ಸರ್ ಇದಾಗಿದೆ. ಹದಿಹರೆಯದ ಹೆಣ್ಣುಮಕ್ಕಳಲ್ಲೂ ಇದು ಕಂಡು ಬರುತ್ತದೆ. ಕೆಲವು ರೀತಿಯ ಹ್ಯೂಮನ್ ಪ್ಯಾಪಿಲೋಮ ವೈರಸ್ (HPV) ಇದಕ್ಕೆ ಪ್ರಮುಖ ಕಾರಣವಾಗಿದೆ. ಎಲ್ಲ ರೀತಿಯ ಎಚ್ಪಿವಿ ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುವುದಿಲ್ಲ. ಎಚ್ಪಿವಿ ಲೈಂಗಿಕವಾಗಿ ವರ್ಗಾಂತರವಾಗುವ ವೈರಸ್ ಆಗಿದ್ದು, ಸೋಂಕಿನಿಂದ ಉಂಟಾಗುವ ಸಾಧ್ಯತೆ ಒದೆ. ಇದರ ಸ್ಪಷ್ಟ ಲಕ್ಷಣಗಳ ಬಗ್ಗೆ ಸರಿಯಾಗಿ ಗೋಚರ ಆಗುವುದಿಲ್ಲ. ಇದರ ಲಕ್ಷಣ ಆರಂಭವಾದಾಗ ಸೋಂಕು ಹೆಚ್ಚುತ್ತದೆ. ರೋಗ ನಿರೋಧಕ ವ್ಯವಸ್ಥೆ ದುರ್ಬಲ ಆಗಿರುವುದು ಕೂಡ ಇದಕ್ಕೆ ಪ್ರಮುಖ ಕಾರಣವಾಗುತ್ತದೆ. ಗರ್ಭಕೋಶದ ಕೆಳಭಾಗದಲ್ಲಿ ಇದು ಜೀವಕೋಶಗಳನ್ನು ಅಭಿವೃದ್ಧಿ ಪಡಿಸುತ್ತದೆ. ಈ ಗರ್ಭ ಕೋಶ ಯೋನಿಯೊಂದಿಗೆ ಸಂಬಂಧ ಹೊಂದಿದೆ. ಸೋಂಕಿನ ರೂಪದಲ್ಲಿ ಆರಂಭವಾಗಿ ಬಳಿಕ ಕ್ಯಾನ್ಸರ್‌ಗೆ ಇದು ಕಾರಣವಾಗುತ್ತದೆ.
ಇದನ್ನೂ ಓದಿ : ಏಷ್ಯನ್ ಪ್ಯಾರಾ ಸಿಟ್ಟಿಂಗ್ ಥ್ರೋಬಾಲ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ | ವಿಜೇತ ತಂಡದಲ್ಲಿ ಮಿಂಚಿದ ತುಮಕೂರಿನ ಯುವಕ



















