ಬೆಂಗಳೂರು | ಸಿಲಿಕಾನ್ ಸಿಟಿ ಬೆಂಗಳೂರಿನ ಹೊಸ ಬೈಯ್ಯಪ್ಪನಹಳ್ಳಿ ಬಡಾವಣೆಯಲ್ಲಿ ವಾಸಿಸುತ್ತಿರುವ ಹೆಣ್ಣುಮಕ್ಕಳಿಗೆ ಶೀಘ್ರವೇ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು GBA ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರಿಗೆ ಪತ್ರ ಬರೆದಿದ್ದಾರೆ.

ಹೊಸ ಬೈಯ್ಯಪ್ಪನಹಳ್ಳಿ ಬಡಾವಣೆಯಲ್ಲಿ ವಾಸಿಸುತ್ತಿರುವ ಹೆಣ್ಣುಮಕ್ಕಳಿಗೆ ಶೌಚಾಲಯ ಒಳಗೊಂಡಂತೆ ಇತರೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇಲ್ಲಿನ ಹೆಣ್ಣುಮಕ್ಕಳು ಶುದ್ಧ ಕುಡಿಯುವ ನೀರಿನ ಸಮಸ್ಯೆಯಿಂದ ಹಲವಾರು ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಿದ್ದಾರೆ.
ಹೀಗಾಗಿ ಈ ಬಡಾವಣೆಯ ಹೆಣ್ಣುಮಕ್ಕಳಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ, ಚರಂಡಿ, ರಸ್ತೆ ಹಾಗೂ ವಿದ್ಯುತ್‌ನಂತಹ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಟ್ಟು ಈ ಬಡಾವಣೆಯ ಹೆಣ್ಣುಮಕ್ಕಳು, ಮಹಿಳೆಯರ ಗುಣಮಟ್ಟದ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕು. ಹಾಗೆಯೇ ತಾವು ಕೈಗೊಂಡ ಕ್ರಮದ ವರದಿಯನ್ನು ಆದಷ್ಟು ಬೇಗ ಆಯೋಗಕ್ಕೆ ಸಲ್ಲಿಸಿ ಎಂದು ನಾಗಲಕ್ಷ್ಮೀ ಚೌಧರಿ ಅವರು ಪತ್ರದಲ್ಲಿ ಕೋರಿದ್ಧಾರೆ.
ಇದನ್ನೂ ಓದಿ : ಹಟ್ಟಿ ಚಿನ್ನದ ಗಣಿ ಮಹಿಳಾ ಕಾರ್ಮಿಕರ ಸಮಸ್ಯೆ ಬಗೆಹರಿಸಿ | ಮಹಿಳಾ ಆಯೋಗದ ಅಧ್ಯಕ್ಷೆ ಚೌಧರಿ ತಾಕೀತು



















