ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಕಾಲ್ತುಳಿತ ಉಂಟಾಗಿ 11 ಜನ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಕಮಿಷನರ್ ದಯಾನಂದ್ ಸೇರಿದಂತೆ ಐವರನ್ನು ಅಮಾನತು ಮಾಡಲಾಗಿತ್ತು. ಇದನ್ನು ಖಂಡಿಸಿ ಹೆಡ್‌ಕಾನ್‌ಸ್ಟೇಬಲ್ ಪ್ರತಿಭಟನೆ ನಡೆಸಿದ್ದರು. ಈಗ ಬಿಜೆಪಿ ಶಾಸಕ ಸುರೇಶ್ ಕುಮಾರ್, ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ಪೊಲೀಸರ ಅಮಾನತು ಖಂಡಿಸಿದ ಹೆಡ್‌ಕಾನ್‌ಸ್ಟೇಬಲ್ ನರಸಿಂಹ ರಾಜು ಜೊತೆ ಫೋನ್ ಮೂಲಕ ಮಾತನಾಡಿ ಬೆಂಬಲ ಸೂಚಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಶಾಸಕ ಸುರೇಶ್ ಕುಮಾರ್, ನಾನು ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆಯನ್ನು ಕೇಳಿಕೊಳ್ಳುವುದೇನೆಂದರೆ ನರಸಿಂಹ ರಾಜು ಅವರ ಅಳಲು ಇಡೀ ಪೊಲೀಸ್ ಇಲಾಖೆಯ ಅಳಲು ಎಂಬುದನ್ನು ಗಮನಿಸಲಿ. ಪ್ರಾಮಾಣಿಕ ಮನಸ್ಸಿನಿಂದ ಇವರು ಮಾಡಿರುವ ಪ್ರತಿಭಟನೆಯನ್ನು ಸಕಾರಾತ್ಮಕವಾಗಿ ಕಾಣಲಿ. ಯಾವುದೇ ಕಾರಣಕ್ಕೂ ಈ ನಿಷ್ಠಾವಂತ ಪೊಲೀಸ್ ಪೇದೆಯ ಮೇಲೆ ಯಾವುದೇ ಕಠಿಣ ಕ್ರಮ ಜರುಗಿಸದಿರಲಿ. ಸಾಮಾನ್ಯ ಪೊಲೀಸ್ ಪೇದೆಯ ನೈತಿಕ ಸ್ಥೈರ್ಯ ಕುಸಿದು ಹೋದರೆ, ಇಲಾಖೆಯನ್ನು ಸರಿಪಡಿಸುವುದು ಬಹಳ ಕಷ್ಟವಾಗುತ್ತದೆ.
ಇಂತಹ ಪೊಲೀಸ್ ಸಿಬ್ಬಂದಿ ಬೀದಿಯಲ್ಲಿ ಗಸ್ತು ಹೊಡೆಯುತ್ತಿದ್ದಾರೆ ಎಂಬ ಕಾರಣದಿಂದ ನಾವೆಲ್ಲ ಮನೆಯಲ್ಲಿ ಮನೆಗಳಲ್ಲಿ ನೆಮ್ಮದಿಯಿಂದ ಇದ್ದೇವೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಇಡೀ ಸಮಾಜ ದಯಾನಂದ್‌ರಿಂದ ಹಿಡಿದು ನರಸಿಂಹರಾಜು ವರೆಗೆ ಇರುವ ನಿಷ್ಠಾವಂತ ಅಧಿಕಾರಿಗಳ ಪರವಾಗಿ ನಿಲ್ಲಲು ಇದು ಸರಿಯಾದ ಸಮಯ, ಸರಿಯಾದ ಕಾರಣ, ಸರಿಯಾದ ಗಳಿಗೆ. ರಾಜ್ಯ ಸರ್ಕಾರ ಮುಟ್ಟು ವಿದ್ಯಮಾನವನ್ನು ಯಾವುದೇ ಸೇಡಿನ ಮನೋಭಾವವಿಲ್ಲದೆ, ಪ್ರಾಂಜಲ ಮನಸ್ಸಿನಿಂದ ವಿಮರ್ಶಿಸಿ ವಿವೇಚನಾಯುಕ್ತ ಹೆಜ್ಜೆ ಇಡಬೇಕು ಎಂದಿದ್ದಾರೆ.

















