ನವದೆಹಲಿ: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ ಸಂಸದರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ದೆಹಲಿಯ ಸಂಸತ್ ಭವನದ ಎದುರು ಬಿಜೆಪಿ ಸಂಸದರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ವಾಲ್ಮೀಕಿ ಹಗರಣ ಹಾಗೂ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ನಡೆಸಿರುವುದು ಬಯಲಾಗಿದೆ. ಹೀಗಾಗಿ ಕೂಡಲೇ ಅವರು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ, ರಾಜೀನಾಮೆ ನೀಡಬೇಕೆಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಸಿದ್ದರಾಮಯ್ಯ ತಮ್ಮಷ್ಟಕ್ಕೆ ತಾವೇ ಪ್ರಾಮಾಣಿಕರು ಎಂದು ಸರ್ಟಿಫಿಕೇಟ್ ತೆಗೆದುಕೊಳ್ಳುತ್ತಾರೆ. ಹಿಂದೆ ಬಿಡಿಎನಲ್ಲಿ ಕೂಡ ಅವರ ಹಗರಣ ಬಯಲಿಗೆ ಬಂದಿತ್ತು. ಆಗ ಆಯೋಗ ರಚಿಸಿ ಪ್ರಕರಣ ಮುಚ್ಚಿ ಹಾಕಿದರು. ಈ ಮಧ್ಯೆ ಮಂಡ್ಯದಲ್ಲಿ ಮುಡಾದ ಹಗರಣ ಆಯಿತು ಆಗ ಸಿದ್ದರಾಮಯ್ಯ ಅವರು ಸಿಬಿಐಗೆ ಕೊಟ್ಟರು. ಈಗ ಮೈಸೂರಿನಲ್ಲಿ ಮುಡಾ ಹಗರಣ ಆಗಿದೆ. ಅದನ್ನು ಯಾಕೆ ಸಿಬಿಐಗೆ ಕೊಡಬಾರದು ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ವಾಲ್ಮೀಕಿ ನಿಗಮದಲ್ಲಿ ಅಷ್ಟೇ ಅಲ್ಲ, ಎಸ್ಸಿಪಿ ಹಾಗೂ ಟಿಎಸ್ ಪಿಯಲ್ಲಿಯೂ ದಲಿತರ ಹಣ ಲೂಟಿ ಮಾಡಿದ್ದಾರೆ. ಎಸ್ಸಿಪಿ ಟಿಎಸ್ ಪಿಯ ಸುಮಾರು 25 ಸಾವಿರ ಕೋಟಿ ರೂ. ದಲಿತರ ಹಣ ನುಂಗಿದ್ದಾರೆ. ಇದು ದಲಿತ ವಿರೋಧಿ ಸರ್ಕಾರವಾಗಿದೆ. ಮುಡಾ ಹಗರಣದಲ್ಲಿ ಸರ್ಕಾರ ಸಿಲುಕಿಕೊಂಡಿರುವುದರಿಂದ ಮುಂದಿನ ಮೂರು ವರ್ಷ ಕೇವಲ ತಮ್ಮ ರಕ್ಷಣೆಗಾಗಿ ಕೆಲಸ ಮಾಡುತ್ತಾರೆ, ಅಭಿವೃದ್ಧಿಗಾಗಿ ಅಲ್ಲ ಎಂದು ಆರೋಪಿಸಿದರು.
ಹೀಗಾಗಿ ಕೂಡಲೇ ರಾಜ್ಯ ಸರ್ಕಾರ ಎರಡೂ ಹಗರಣಗಳನ್ನು ಸಿಬಿಐಗೆ ವಹಿಸಿ, ಸಿಎಂ ರಾಜೀನಾಮೆ ನೀಡಬೇಕು. ಇಲ್ಲವಾದರೆ ಮುಂದಿನ ವಾರ ಸಂಸತ್ ಒಳಗೂ ವಿಸ್ತೃತವಾದ ಚರ್ಚೆಗೆ ಅವಕಾಶ ನೀಡುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡುವುದಾಗಿ ಹೇಳಿದ್ದಾರೆ.
ಸಂಸದರಾದ ಗೋವಿಂದ ಕಾರಜೋಳ, ವಿಶ್ವೆಶ್ವರ ಹೆಗಡೆ ಕಾಗೇರಿ, ಡಾ. ಮಂಜುನಾಥ, ಪಿ.ಸಿ ಗದ್ದಿಗೌಡರ, ಯದುವೀರ ಒಡೆಯರ್, ಬಿ.ವೈ ರಾಘವೇಂದ್ರ, ಜಗ್ಗೇಶ್, ನಾರಾಯಣಸಾ ಭಾಂಡಗೆ ಸೇರಿದಂತೆ ಹಲವರಿದ್ದರು.