‘
ಮಂಡ್ಯ: ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಮಂಡ್ಯದವರನ್ನು ಛತ್ರಿಗಳು ಅಂತಾ ಕರೆದಿದ್ದಾರೆ. ಹೀಗಾಗಿ ಸೋಮವಾರದೊಳಗೆ ಬಹಿರಂಗ ಕ್ಷಮೆ ಕೇಳಬೇಕೆಂದು ಸಕ್ಕರೆ ನಾಡಿನ ಜನರು ಆಗ್ರಹಿಸಿದ್ದರು. ಆದರೆ, ಗಡುವು ಮುಗಿದರೂ ಡಿಸಿಎಂ ಕ್ಷಮೆ ಕೇಳಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಪ್ರತಿಭಟನೆ ನಡೆಸಲಾಗುತ್ತಿದೆ.
ಡಿಕೆಶಿ ಹೇಳಿಕೆಗೆ ಮಂಡ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಂಡ್ಯದವರಲ್ಲಿ ರಾಜಕೀಯ ಆಸಕ್ತಿ ಹೆಚ್ಚು. ಚುನಾವಣೆಗಳು ಬಂದರೆ ಹಬ್ಬದಂತೆ ಸ್ವೀಕರಿಸುತ್ತಾರೆ. ಹೀಗಾಗಿಯೇ ಇಡೀ ರಾಜ್ಯವಲ್ಲದೇ, ರಾಷ್ಟ್ರಮಟ್ಟದಲ್ಲೂ ಮಂಡ್ಯ ಸದ್ದು ಮಾಡುತ್ತಿರುತ್ತದೆ. ಇಂತಹ ಜಿಲ್ಲೆಯ ಬಗ್ಗೆ ಡಿಸಿಎಂ ಮಾತನಾಡಿದ್ದು, ತಪ್ಪು ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿಪಕ್ಷಗಳು ಕೂಡ ಇದಕ್ಕೆ ಬೆಂಬಲ ನೀಡಿವೆ.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಡಿಕೆಶಿ, ಮಂಡ್ಯದ ಜನರಲ್ಲಿ ನಾನು ಕೂಡ ಒಕ್ಕಲಿಗ. ದೇವೇಗೌಡರಿಗೆ, ಎಸ್.ಎಂ. ಕೃಷ್ಣ, ಕುಮಾರಸ್ವಾಮಿಗೆ ಆಶೀರ್ವಾದ ಮಾಡಿದ್ದೀರಿ. ನನಗೂ ಪೆನ್ನು, ಪೇಪರ್ ಕೊಡಿ, ಆಶೀರ್ವಾದ ಮಾಡಿ ಎಂದು ಮನವಿ ಮಾಡಿದ್ದರು. ಅದಕ್ಕೆ ನಾವು ಕೂಡ ಆಶೀರ್ವಾದ ಮಾಡಿದೇವು. ಆದರೆ, ಈಗ ನಮ್ಮನ್ನೇ ಛತ್ರಿಗಳೆಂದು ಕರೆದಿರುವುದು ಎಷ್ಟು ಸರಿ? ಎಂದು ಮಂಡ್ಯದ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಛತ್ರಿ ಪದ ಬಳಕೆಯ ವಿರುದ್ಧ ಕ್ಷಮೆ ಕೇಳಬೇಕೆಂದು ಡಿಕೆಶಿಗೆ ಮಂಡ್ಯದ ಜನ ಸೋಮವಾರದವರೆಗೂ ಗಡುವು ನೀಡಿದ್ದರು. ಆದರೆ, ಗಡುವು ಮುಗಿದಿದ್ದು, ಇಂದು ಮನೆಯಿಂದ ಛತ್ರಿ ತಂದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.