ತುಮಕೂರು: ರೈತರ ಸಾಲ ಮನ್ನಾ (Loan Waiver) ಮಾಡಿ ಬಾಕಿ ಉಳಿಸಿದ್ದ 300 ಕೋಟಿ ರೂ. ಬಾಕಿ ಹಣವನ್ನು ತೀರಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಸಿಎಂ ಆಗಿದ್ದ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡಿ ಬಾಕಿ ಉಳಿಸಿದ್ದ 300 ಕೋಟಿ ರೂ. ಹಣವನ್ನು ಕಾಂಗ್ರೆಸ್ ಸರ್ಕಾರವು ಮುಂದಿನ ದಿನಗಳಲ್ಲಿ ತೀರಿಸಲಿದೆ ಎಂದು ಭರವಸೆ ನೀಡಿದ್ದಾರೆ.
ಸಹಕಾರ ಸಚಿವ ಕೆಎನ್ ರಾಜಣ್ಣ ಅವರ 75ನೇ ವರ್ಷದ ‘ಅಮೃತ ಮಹೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದು ಕುಮಾರಸ್ವಾಮಿ ಹೆಸರು ಪಡೆದುಕೊಂಡರು. ಆದರೆ ಬಾಕಿಯನ್ನು ನಮ್ಮ ಸರ್ಕಾರ ತೀರಿಸಬೇಕಾಗಿದೆ. ಹೆಸರು ಅವರಿಗೆ, ಹೊರೆ ಹೊತ್ತುಕೊಂಡಿದ್ದು ನಾವು ಎಂದು ಹೇಳಿದ್ದಾರೆ.
ಬಡವರಿಗೆ ಅಕ್ಕಿ ಕೊಡುವ ಯೋಜನೆಗೆ ಕೆಎನ್ ರಾಜಣ್ಣ ‘ಅನ್ನಭಾಗ್ಯ’ ಹೆಸರು ಸೂಚಿಸಿದ್ದರು. ಯೋಜನೆ ಜಾರಿಗೆ ತರುವ ಸಮಯದಲ್ಲಿ ಅದೇ ಹೆಸರಿಡಲಾಯಿತು. ಶಾಲಾ ಮಕ್ಕಳಿಗೆ ‘ಶೂ ಭಾಗ್ಯ’ ಕಲ್ಪಿಸಲು ರಾಜಣ್ಣ ಕಾರಣ ಎಂದಿದ್ದಾರೆ.



















