ಹರಿಹರ: ಚಿಂತಕ ಪ್ರೊ. ಭಗವಾನ್ ರಾಮನ ಬಗ್ಗೆ ಮತ್ತೊಂದು ವಿವಾದಾತ್ಮಕ ಹಳಿಕೆ ನೀಡಿದ್ದಾರೆ.
ಶ್ರೀರಾಮ ದಶರಥ ಮಹಾರಾಜರಿಗೆ ಹುಟ್ಟಿಲ್ಲ, ಪುರೋಹಿತನಿಗೆ ಹುಟ್ಟಿದ್ದು. ಮಹಾಭಾರತದ ಪಾಂಡವ ಸಹೋದರರು ಹುಟ್ಟಿದ್ದು ದೇವತೆಗಳಿಂದ. ಈ ಮಾತಿಗೆ ನನ್ನ ಬಳಿ ಪುರಾವೆಗಳಿವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹೊರವಲಯದ ಕೃಷ್ಣಪ್ಪ ಭವನದದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮಾಯಣದ ರಾಮ ದಶರಥ ಮಹಾರಾಜರ ಮಗ ಎಂದು ತಿಳಿದರೂ ಆತ ದಶರಥ ಮಹಾರಾಜರಿಗೆ ಹುಟ್ಟಿಲ್ಲ.
ಪುರೋಹಿತನೊಬ್ಬನಿಂದ ಹುಟ್ಟಿದ್ದಾನೆ. ಮಹಾಭಾರತದ ವಿಷಯಕ್ಕೆ ಬಂದರೆ ಮಕ್ಕಳು ಹುಟ್ಟಿಸಲಾಗಲ್ಲ ಎಂಬ ಶಾಪಗ್ರಸ್ಥನಾಗಿದ್ದ ಯುಧಿಷ್ಠಿರ, ಕುರು ರಾಜ್ಯದ ರಾಜ ಪಾಂಡು ಎಂದಿದ್ದರೂ, ಪಾಂಡವರು ಹುಟ್ಟಿದ್ದು ಮಾತ್ರ ದೇವತೆಗಳ ಅನುಗ್ರಹದಿಂದ ಎಂದು ಹೇಳಿದ್ದಾರೆ.
ಪುರಾಣಗಳನ್ನು ಅಭ್ಯಾಸ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಈ ಪುರಾಣಗಳು ಹಾಗೂ ಮನುಸ್ಮೃತಿಯಲ್ಲಿ ಬ್ರಾಹ್ಮಣರನ್ನು ಬಿಟ್ಟು ಉಳಿದೆಲ್ಲ ಜಾತಿ, ಜನಾಂಗದವರನ್ನು ಶೂದ್ರರೆಂದು ಕರೆದಿವೆ. ಶೂದ್ರರು ಬ್ರಾಹ್ಮಣರ ಸೇವಕರು ಎಂದು ಹೇಳಿದೆ.
ಮನುಷ್ಯರನ್ನು ಮನುಷ್ಯರಂತೆ ಕಾಣದ ಇಂತಹ ಪುರಾಣ, ಮನುಸ್ಮೃತಿಯಿಂದ ದೇಶದ ಬಹುಸಂಖ್ಯಾತರಿಗೆ ಏನೂ ಪ್ರಯೋಜನವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಲಂಬಿಯಾ ವಿಶ್ವವಿದ್ಯಾನಿಲಯದ ಅಧ್ಯಾಪಕರು ಜಗತ್ತಿನ ಶ್ರೇಷ್ಠ ವಿದ್ವಾಂಸ ಡಾ.ಅಂಬೇಡ್ಕರ್ ಎಂದು ನಿರ್ಣಯಿಸಿದ್ದಾರೆ. ಅಂಬೇಡ್ಕರ್ ಅವರಿಗೆ ತಿಳಿಯದ ವಿಷಯವಿರಲಿಲ್ಲ, ಅವರಿಗೆ ಹಾಗೂ ಅಸ್ಪೃಶ್ಯರಿಗೆ ನ್ಯಾಯ ಕೊಡಿಸುವ ಹಂಬಲದಲ್ಲಿ ಅವರು ಜಗತ್ತಿನ ಎಲ್ಲ ವಿಷಯಗಳನ್ನು ಅಭ್ಯಾಸ ಮಾಡಿದ್ದರು ಎಂದು ಹೇಳಿದ್ದಾರೆ.
ಹಿಂದೂ ಧರ್ಮದಿಂದ ಬೇಸತ್ತ ಅಂಬೇಡ್ಕರ್‌ರವರು ಕ್ರೈಸ್ತ ಮತ್ತು ಇಸ್ಲಾಂ ಧರ್ಮಕ್ಕಿಂತ ಹೆಚ್ಚು ಸಮಾನತೆ ಹಾಗೂ ವೈಜ್ಞಾನಿಕತೆಯನ್ನು ಪ್ರತಿಪಾದಿಸುವ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು ಎಂದರು. ಬ್ರಾಹ್ಮಣರನ್ನು ಹೊರತುಪಡಿಸಿ ಲಿಂಗಾಯಿತರು, ಕುರುಬರು ಸೇರಿದಂತೆ ಎಲ್ಲ ಜಾತಿ, ಜನಾಂಗದವರು ಶೂದ್ರರು ಎಂದು ಪರಿಗಣಿಸಲ್ಪಡುತ್ತಾರೆ. ದಲಿತರೆಂದರೆ ಕೇವಲ ಎಸ್‌ಸಿ- ಎಸ್‌ಟಿ ಮಾತ್ರವಲ್ಲ. ಎಲ್ಲ ಜಾತಿ, ಜನಾಂಗದ ಬಡವರು, ಶೋಷಿತರು ಎಲ್ಲರೂ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

