ಬೆಂಗಳೂರು: ರಾಜ್ಯ ಸರ್ಕಾರವು ಭಾಷಾ ವಿಷಯದಲ್ಲಿ ಮಹತ್ತರ ನಿರ್ಣಯವೊಂದನ್ನು ತೆಗೆದುಕೊಂಡಿದೆ. ರಾಜ್ಯದಲ್ಲಿ ತಯಾರಾಗುವ ಸರ್ಕಾರಿ ಹಾಗೂ ಖಾಸಗಿಯಾಗಿ ತಯಾರಾಗುವ ಉತ್ಪನ್ನಗಳಿಗೆ ಕನ್ನಡ ಲೇಬಲ್, ಹೆಸರು ಡೈರೆಕ್ಷನ್ ಸೇರಿದಂತೆ ಎಲ್ಲವನ್ನು ಕನ್ನಡದಲ್ಲೇ ನಮೂದಿಸಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದೊಳಗೆ ತಯಾರಿಸಿದ ಮತ್ತು ಮಾರಾಟವಾಗುವ ಎಲ್ಲ ಕೈಗಾರಿಕಾ ಮತ್ತು ಇತರೆ ಗ್ರಾಹಕ ಉತ್ಪನ್ನಗಳ ಹೆಸರು ಮತ್ತು ಅವುಗಳ ಬಳಕೆಯ ಕುರಿತಾದ ನಿರ್ದೇಶನಗಳನ್ನು ಕನ್ನಡದಲ್ಲೇ ನಮೂದಿಸಬೇಕು. ಈ ಕುರಿತು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಉಮಾದೇವಿ ಅವರು ಸುತ್ತೋಲೆಯಲ್ಲಿ ಹೇಳಿದ್ದಾರೆ.
ಸುತ್ತೋಲೆಯಲ್ಲಿ ಏನಿದೆ?
ಭಾಷೆಯು ನೆಲದ ಸಂಸ್ಕೃತಿ, ಸಂಪ್ರದಾಯ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಒಂದು ಭಾಷೆ ಬೆಳವಣಿಗೆಯಾಗಬೇಕಾದರೆ ಆ ನೆಲದಲ್ಲಿನ ಉತ್ಪಾದನೆ, ಮಾರುಕಟ್ಕೆ, ವ್ಯವಹಾರಗಳು ಸ್ಥಳೀಯ ಭಾಷೆಯಲ್ಲಿರಬೇಕು. ಕನ್ನಡ ಭಾಷೆಯ ಸವಗ್ರ ಅಭಿವೃದ್ಧಿಗಾಗಿ ಮತ್ತು ಕನ್ನಡಿಗರಿಗೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿ೦ದ ಸರ್ಕಾರವು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ, 2022ನ್ನು ದಿನಾ೦ಕ: 12.03.2024 ರಿಂದ ಜಾರಿಗೆ ತಂದಿರುತ್ತದೆ. ಸಾಧ್ಯವಾದಷ್ಟು ಮಟ್ಟಿಗೆ ರಾಜ್ಯದೊಳಗೆ ತಯಾರಿಸಿದ ಮತ್ತು ಮಾರಾಟವಾಗುವ ಎಲ್ಲಾ ಕೈಗಾರಿಕಾ ಮತ್ತು ಇತರೆ ಗ್ರಾಹಕ ಉತ್ಪನ್ನಗಳ ಹೆಸರು ಮತ್ತು ಅವುಗಳ ಬಳಕೆಯ ಕುರಿತಾದ ನಿರ್ದೇಶನಗಳು ಯಾವುದಾದರೂ ಇದ್ದಲ್ಲಿ ಯಾವುದೇ ಇತರ ಭಾಷೆಯ ಜೊತೆಗೆ ಕನ್ನಡದಲ್ಲಿ ಇರತಕ್ಕದ್ದೆಂದು ಹೇಳಲಾಗಿದೆ.
ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಸರ್ಕಾರಿ ಹಾಗೂ ಖಾಸಗಿ ಕ್ಲೇತ್ರದಲ್ಲಿ ತಯಾರಾಗುವ ಎಲ್ಲಾ ಕೈಗಾರಿಕೆ ಮತ್ತು ಗ್ರಾಹಕ ಉತ್ಪನ್ನಗಳ ಮೇಲೆ ಹೆಸರು ಮತ್ತು ಅವುಗಳ ಬಳಕೆಯ ಕುರಿತಾದ ನಿರ್ದೇಶನಗಳನ್ನು ಇತರ ಭಾಷೆಗಳ ಜೊತೆಗೆ ಕನ್ನಡದಲ್ಲಿಯೂ ಕಡ್ಮಾಯವಾಗಿ ಮುದ್ರಿಸುವಂತೆ ಈ ಮೂಲಕ ಸೂಚಿಸಲಾಗಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.