ರಾಮನಗರ: ಬಿಡದಿಯ ಇಂಡಸ್ಟ್ರಿಯಲ್ ಪ್ರದೇಶದಲ್ಲಿರುವ ಪ್ರತಿಷ್ಠಿತ ಕಾರ್ಖಾನೆಯ ಶೌಚಾಲಯದಲ್ಲಿ ಪಾಕಿಸ್ತಾನ ಪರ ಬರಹ ಪತ್ತೆಯಾಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಶೌಚಾಲಯದ ಗೋಡೆ ಮೇಲೆ `ಪಾಕಿಸ್ತಾನಕ್ಕೆ ಜೈ, ಪಾಕಿಸ್ತಾನಕ್ಕೆ ಜಯವಾಗಲಿ’ ಎಂಬ ಬರಹ ಪತ್ತೆಯಾಗಿದೆ. ಈ ಬರಹ ಬರೆದ ಪಾಪಿಗಳು, ಕನ್ನಡಿಗರ ಬಗ್ಗೆಯೂ ಅವಾಚ್ಯದಿಂದ ಬರೆದಿದ್ದಾರೆ. ಕಾರ್ಖಾನೆಯಲ್ಲಿ ಕೆಲಸ ಮಾಡುವ ದುಷ್ಕರ್ಮಿಗಳೇ ಈ ರೀತಿ ಬರೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಈ ಕೃತ್ಯವನ್ನು ಕಾರ್ಖಾನೆಯ ಆಡಳಿತ ಮಂಡಳಿ ನೋಟಿಸ್ ಬೋರ್ಡ್ ನಲ್ಲಿ ಹಾಕಿದ್ದು, ಈ ರೀತಿಯ ಬರವಣಿಗೆ ಉದ್ಯೋಗಿಗಳ ಮನಸ್ಸಿನಲ್ಲಿ ಅಶಾಂತಿ ಸೃಷ್ಟಿಸುವುದಲ್ಲದೇ ಸಂಸ್ಥೆಯಲ್ಲಿ ತೀವ್ರ ರೀತಿಯ ಅಶಿಸ್ತಿನ ಬೆಳವಣಿಗೆಗೆ ಕಾರಣವಾಗುತ್ತದೆ. ಇದು ದೇಶದ ಕಾನೂನಿನ ಚೌಕಟ್ಟಿನಲ್ಲಿ ದೇಶದ್ರೋಹಿ ಅಪರಾಧವಾಗುತ್ತದೆ. ಅಂತಹ ಕಾರ್ಮಿಕರನ್ನು ಪೊಲೀಸರಿಗೆ ಒಪ್ಪಿಸಿ, ಜೈಲು ವಾಸವಾಗುವಂತೆ ಕ್ರಮವಹಿಸುತ್ತೇವೆ ಎಂದು ಎಚ್ಚರಿಕೆ ನೀಡಿದೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಬರಹ ಬರೆದ ಶೌಚಾಲಯದ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಕಾರ್ಖಾನೆಯಲ್ಲಿ ಸುಮಾರು 400 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಕುರಿತು ಬಿಡದಿ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.