ವಯನಾಡ್: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಯ್ಬರೇಲಿ ಹಾಗೂ ಕೇರಳದ ವಯನಾಡು ಕ್ಷೇತ್ರಗಳಲ್ಲಿ ಗೆದ್ದಿದ್ದ ಅವರ ಸಹೋದರ ರಾಹುಲ್ ಗಾಂಧಿ ವಯನಾಡನ್ನು ತೊರೆದು ರಾಯ್ಬರೇಲಿ ಉಳಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು.
ಕಾಂಗ್ರೆಸ್ ನಿಂದ ನಾಯಕಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದ್ದರು. ಇಂದು ಮತ ಎಣಿಕೆ ಪೂರ್ಣಗೊಂಡಿದ್ದು, ಬರೋಬ್ಬರಿ 4 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಪ್ರಿಯಾಂಕಾ ಗಾಂಧಿ ಜಯ ಸಾಧಿಸಿದ್ದಾರೆ. ಇದು ವಯನಾಡಿನಲ್ಲಿ ಸೃಷ್ಟಿಯಾದ ದಾಖಲೆಯಾಗಿದೆ.
2024 ರ ಚುನಾವಣೆಯಲ್ಲಿ ರಾಹುಲ್ ಗಾಂಧಿ 3,64,422 ಮತಗಳಿಂದ ತಮ್ಮ ಎದುರಾಳಿಯನ್ನುಸೋಲಿಸಿ 6,47,445 ಮತ ಪಡೆದು ಗೆಲುವು ಸಾಧಿಸಿದ್ದರು. ಈ ದಾಖಲೆಯನ್ನು ಪ್ರಿಯಾಂಕಾ ಮುರಿದಿದ್ದಾರೆ.
ವಯನಾಡ್ ಕ್ಷೇತ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಪ್ರಿಯಾಂಕಾ ಸ್ಪರ್ಧಿಸಿದ್ದರು.