ರಾಯ್ಬರೇಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Elections) ವಾರಣಾಸಿಯಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದ್ದರೆ ಮೋದಿ ಸೋಲುತ್ತಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಅಮೇಥಿ ಮತ್ತು ರಾಯ್ಬರೇಲಿಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದ ಹಿನ್ನೆಲೆಯಲ್ಲಿ ಇಂದು ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ಕಾಂಗ್ರೆಸ್ ಗೆಲುವು “ಐತಿಹಾಸಿಕವಾದುದು”. ಪ್ರಿಯಾಂಕಾ ಗಾಂಧಿ ವಾರಾಣಸಿಯಲ್ಲಿ ಸ್ಪರ್ಧಿಸಿದ್ದರೆ ಅವರು ಪ್ರಧಾನಿ ಮೋದಿಯನ್ನು ಭಾರೀ ಅಂತರದಿಂದ ಸೋಲಿಸುತ್ತಿದ್ದರು ಎಂದು ಹೇಳಿದ್ದಾರೆ.
ತಾನು ಮತ್ತು ಪಕ್ಷದ ಇತರ ಸಂಸದರು ಚುನಾವಣಾ ಫಲಿತಾಂಶದ ಕುರಿತು ಅಹಂಕಾರ ಪಡುವುದಿಲ್ಲ. ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯ ಜನರನ್ನು ಕಡೆಗಣಿಸಿದ್ದಾರೆ. ಕೈಗಾರಿಕೋದ್ಯಮಿಗಳು ಮತ್ತು ಇತರ ವ್ಯಕ್ತಿಗಳಿಗೆ ಪ್ರಾಮುಖ್ಯತೆ ನೀಡಿದ್ದಾರೆ. ಹೀಗಾಗಿಯೇ ಜನ ಸಾಮಾನ್ಯರು ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ಮಾತನಾಡಿ, ದೇಶದಲ್ಲಿ ನಮಗೆ ಸಮರ್ಪಿತ, ನಿಜವಾದ ಮತ್ತು ಸ್ವಚ್ಛ ರಾಜಕೀಯ ಬೇಕು ಎಂಬ ಸಂದೇಶವನ್ನು ರವಾನಿಸಿದೆ. ಇದೊಂದು ಐತಿಹಾಸಿಕ ಗೆಲುವು. ಈ ಸಂದೇಶವು ಅವಧ್‌ನಿಂದ ಇಡೀ ಉತ್ತರ ಪ್ರದೇಶಕ್ಕೆ ಮತ್ತು ಇಡೀ ದೇಶಕ್ಕೆ ಶುದ್ಧ ರಾಜಕಾರಣದ ಅಗತ್ಯವಿದೆ ಎಂಬುವುದನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.