ವಯನಾಡ್ ಲೋಕಸಭೆ ಉಪ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಇದೇ ಮೊದಲ ಬಾರಿ ಲೋಕಸಭೆ ಪ್ರವೇಶಿಸುವತ್ತ ಹೆಜ್ಜೆ ಹಾಕಿದ್ದಾರೆ. ವಯನಾಡ್‌ನಲ್ಲಿ ಪ್ರಿಯಾಂಕಾ ಗಾಂಧಿ ಅವರು ಭರ್ಜರಿ 65 ಸಾವಿರ ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ಬಾರಿ ಬಿಜೆಪಿ ಹಾಗೂ ಬಿಜೆಪಿ ಬೆಂಬಲಿತ ಪಕ್ಷಗಳನ್ನು ಹೊರತುಪಡಿಸಿ, ಉಳಿದ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವಿತ್ತು.
ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇದೇ ಮೊದಲ ಬಾರಿ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದ್ದರು. ರಾಹುಲ್ ಗಾಂಧಿ ರಾಜೀನಾಮೆಯಿಂದಾಗಿ ತೆರವಾಗಿದ್ದ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದ್ದರು. ಈ ಬಾರಿಯೂ ಅಲ್ಲಿನ ಮತದಾರ ಕಾಂಗ್ರೆಸ್ ಗೆ ಜೈ ಎಂದಿದ್ದಾನೆ.
ಕೇರಳದ ವಯನಾಡ್‌ನಲ್ಲಿ ಈಚೆಗೆ ಭಾರೀ ದುರಂತ ಸಂಭವಿಸಿತ್ತು. ಇಲ್ಲಿನ ವೈತ್ತಿರಿ ತಾಲ್ಲೂಕಿನ ಮೆಪ್ಪಾಡಿ ಪುಂಜಿರಿಮಟ್ಟಂ, ಮುಂಡಕ್ಕೈ , ಚೂರಲ್ಮಲಾ ಹಾಗೂ ವೆಳ್ಳರಿಮಲ ಗ್ರಾಮಗಳಲ್ಲಿ ಸರಣಿ ಭೂಕುಸಿತವುಂಟಾಗಿತ್ತು. ಈ ಸಂಕಷ್ಟದ ಸಮಯದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ವಯನಾಡ್‌ನ ಸಂಸದ ರಾಹುಲ್‌ಗಾಂಧಿ ಅವರು ಇಲ್ಲಿನ ಜನರ ನೋವುಗಳಿಗೆ ಸ್ಪಂದಿಸಿದ್ದರು. ಪ್ರಿಯಾಂಕಾ ಗಾಂಧಿ ಅವರು ಸಹ ಭೇಟಿ ನೀಡಿ, ಜನರಿಗೆ ಸ್ಪಂದಿಸಿದ್ದರು. ಸದ್ಯ ಅಲ್ಲಿನ ಜನರು ಮತ್ತೊಮ್ಮೆ ಗಾಂಧಿ ಕುಟುಂಬಕ್ಕೆ ಜೈ ಎಂದಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತಿದೆ.