ಖಾಸಗಿ ಆಸ್ಪತ್ರೆಗಳಿಗೆ ಠಕ್ಕರ್ ನೀಡಲು ಸರ್ಕಾರಿ ಆಸ್ಪತ್ರೆಗಳು ಮುಂದಾಗಿವೆ. ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದಾದರೆ ಪ್ರೈವೇಟ್ ಇನ್ಷ್ಯೂರೆನ್ಸ್ ಸೌಲಭ್ಯ ಸಿಗಲಿದ್ದು, ಇದು ಮಧ್ಯಮ ಹಾಗೂ ಬಡ ಕುಟುಂಬಗಳಿಗೆ ಉತ್ತಮ ಚಿಕಿತ್ಸೆ ಪಡೆಯಲು ಸಹಕಾರಿಯಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಕ್ಟೋರಿಯಾ, ಕಿದ್ವಾಯಿ ಆಸ್ಪತ್ರೆ ಸೇರಿದಂತೆ ರಾಜ್ಯದ ಅನೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಇನ್ಸೂರೆನ್ಸ್ ಸೌಲಭ್ಯ ಲಭ್ಯವಾಗುತ್ತಿದ್ದು, ಕೆಲವು ಖಾಸಗಿ ಇನ್ಸೂರೆನ್ಸ್ ಕಂಪನಿಗಳ ಜೊತೆ ಈಗಾಗಲೇ ಸರ್ಕಾರಿ ಆಸ್ಪತ್ರೆಗಳು ಒಡಂಬಡಿಕೆ ಮಾಡಿಕೊಂಡಿವೆ. ಕೆಲವು ಚಿಕಿತ್ಸೆಗಳು ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿಯಾಗುತ್ತಿರುವುದರಿಂದ ಜನ ಸರ್ಕಾರಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ಇನ್ನು ಸರ್ಕಾರಿ ಆಸ್ಪತ್ರೆಗೆ ಬರುವ ಅನೇಕರ ಬಳಿ ಬಿಪಿಎಲ್ ಕಾರ್ಡ್ ಇರುವುದಿಲ್ಲ. ಅಂತಹ ರೋಗಿಗಳಿಗೆ ಈ ಖಾಸಗಿ ವಿಮೆ ಯೋಜನೆ ಅನುಕಾಲವಾಗಲಿದ್ದು, ಕಡಿಮೆ ವೆಚ್ಚದಲ್ಲಿ ಇನ್ಸೂರೆನ್ಸ್ ಮೂಲಕ ಚಿಕಿತ್ಸೆ ಪಡೆಯಲು ರೋಗಿಗಳಿಗೆ ಸಹಕಾರಿಯಾಗಿದೆ ಎಂದಿದ್ದಾರೆ.