ಹಾಸನ: ರಾಜ್ಯದಲ್ಲಿ ಖಾಸಗಿ ಫೈನಾನ್ಸ್ಗಳ ಹಾವಳಿ ಮಿತಿ ಮೀರುತ್ತಿದ್ದು, ಮನೆಗೆ ಬೀಗ ಜಡಿದ ಪರಿಣಾಮ ವೃದ್ಧ ದಂಪತಿ ಬೀದಿಗೆ ಬಂದ ಅಮಾನವೀಯ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊರಟಕೆರೆ ಗ್ರಾಮದಲ್ಲಿ ನಡೆದಿದೆ.
ಸಾಲ ಕಟ್ಟಿಲ್ಲ ಎಂದು ವೃದ್ಧ ದಂಪತಿ ಸಣ್ಣಯ್ಯ(80), ಜಯಮ್ಮ(75)ರನ್ನ ಫೈನಾನ್ಸ್ ಸಿಬಂದಿ ಹೊರಹಾಕಿದ್ದು, ಕೊರೆಯುವ ಚಳಿಯಲ್ಲೇ ಬೀದಿಯಲ್ಲಿ ವಾಸಮಾಡಬೇಕಾದ ಸ್ಥಿತಿ ಉದ್ಭವಿಸಿದೆ. ಕೋರ್ಟ್ ಆದೇಶ ಎಂದು ಮನೆ ಹಾಗೂ ಕೊಟ್ಟಿಗೆಗೂ ಬೀಗ ಹಾಕಿರುವ ಆರೋಪ ಕೇಳಿಬಂದಿದೆ.
2023ರಲ್ಲಿ ಮಗನ ಕ್ಯಾನ್ಸರ್ ಚಿಕಿತ್ಸೆಗಾಗಿ ಮನೆ ಅಡಮಾನ ಇಟ್ಟು ಖಾಸಗಿ ಫೈನಾನ್ಸ್ ಬಳಿ 2 ಲಕ್ಷ ರೂ. ಸಾಲವನ್ನು ವೃದ್ಧ ದಂಪತಿ ಪಡೆದಿದ್ದರು. ಒಂದು ವರ್ಷ ಸಾಲದ ಕಂತುಕೂಡ ಕಟ್ಟಿದ್ದರು ಎನ್ನಲಾಗಿದ್ದು, ಫೈನಾನ್ಸ್ ಕಂಪನಿಯ ಅಮಾನವೀಯ ಕೃತ್ಯಕ್ಕೆ ಜನರ ಆಕ್ರೋಶ ವ್ಯಕ್ತವಾಗಿದೆ. ಒಂದು ವಾರದಿಂದ ಮನೆಯ ಹೊರಗೇ ವಾಸ ಮಾಡುತ್ತಿರುವ ದಂಪತಿ, ನಾವು ಸಾಲ ಕಟ್ಟುತ್ತೇವೆ ಸಮಯ ಕೊಡಿ ಎಂದು ಕೈ ಮುಗಿದು ಅಂಗಲಾಚುತ್ತಿದ್ದಾರೆ. ಜೊತೆಗೆ ಸಾಲ ತೀರಿಸಲು ತಮಗೆ ಯಾರಾದರೂ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಜಗಳ | ಕಬ್ಬು ಕತ್ತರಿಸುವ ಮಚ್ಚಿನಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ



















