ತೆಹ್ರಿ (ಉತ್ತರಾಖಂಡ) : ಜಿಲ್ಲೆಯಲ್ಲಿ ಭೀಕರ ದುರಂತ ಸಂಭವಿಸಿದೆ. ಪ್ರವಾಸಿಗರ ಖಾಸಗಿ ಬಸ್ 70 ಅಡಿ ಆಳದ ಕಂದಕಕ್ಕೆ ಬಿದ್ದು ನಾಲ್ವರು ಮಹಿಳೆಯರು ಸೇರಿ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.
ಗುಜರಾತ್ ಮತ್ತು ದೆಹಲಿಯ ಯಾತ್ರಿಕರು ಋಷಿಕೇಶ ಬಳಿಯ ಕುಂಜಾಪುರಿಗೆ ಭೇಟಿ ನೀಡಿದ್ದರು. ಈ ವೇಳೆ, ಬ್ರೇಕ್ ವಿಫಲವಾಗಿ ಬಸ್ ಕಮರಿಗೆ ಬಿದ್ದಿದೆ. ಮಾಹಿತಿ ಬಂದ ಕೂಡಲೇ ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಅಪಘಾತದಲ್ಲಿ 5 ಯಾತ್ರಿಕರು ಸಾವಿಗೀಡಾಗಿದ್ದಾರೆ. ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಗುಜರಾತ್ ಮತ್ತು ದೆಹಲಿಯವರಾಗಿದ್ದಾರೆ. ಅವರು ಕುಂಜಾಪುರಿಗೆ ಭೇಟಿ ನೀಡಿದ್ದರು. ಅಲ್ಲಿಂದ ಹಿಂತಿರುಗುವಾಗ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ಸಿಎಂ ಧಾಮಿ ಆಘಾತ: ತೆಹ್ರಿಯಲ್ಲಿ ನಡೆದ ಬಸ್ ಅಪಘಾತದ ಸುದ್ದಿ ಅತ್ಯಂತ ದುಃಖಕರವಾಗಿದೆ. ಅಗಲಿದ ಆತ್ಮಗಳಿಗೆ ಸಂತಾಪ ಮತ್ತು ದುಃಖಿತ ಕುಟುಂಬಗಳಿಗೆ ಈ ಅಪಾರ ನಷ್ಟವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಜಿಲ್ಲಾಡಳಿತ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಗಾಯಾಳುಗಳನ್ನು ರಕ್ಷಿಸಿವೆ. ಗಂಭೀರವಾಗಿ ಗಾಯಗೊಂಡವರನ್ನು ಏಮ್ಸ್ಗೆ ಕಳುಹಿಸಲಾಗಿದೆ. ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.
ಇದನ್ನೂ ಓದಿ : ನ.28ಕ್ಕೆ ಉಡುಪಿಗೆ ಪ್ರಧಾನಿ ಮೋದಿ | ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಿಸುವಂತೆ ಶಾಸಕ ಯಶ್‌ಪಾಲ್ ಸುವರ್ಣ ಮನವಿ


















