ಮಂಗಳೂರು : ಖಾಸಗಿ ಬಸ್ ಸ್ಕೂಟಿಗೆ ಡಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವತಿ ಸಾವನ್ನಪ್ಪಿರುವ ಘಟನೆ ಮಂಗಳೂರು ನಗರದ ನಂತೂರು ವೃತ್ತದ ಬಳಿ ನಡೆದಿದೆ.
ಬಳ್ಳಾಲ್ಬಾಗ್ ನಿವಾಸಿ ದೀಪ್ತಿ(26) ಮೃತ ದುರ್ದೈವಿಯಾಗಿದ್ದಾರೆ. ಇನ್ನು ಈಕೆಗೆ ವಿವಾಹ ನಿಶ್ಚಿಯವಾಗಿದ್ದು, ಬರ್ತ್ಡೇ ಪಾರ್ಟಿಗೆಂದು ವಾಮಂಜೂರಿಗೆ ಭಾವಿ ಪತಿ ಜತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಅದೃಷ್ಟವಶಾತ್ ದೀಪ್ತಿ ಭಾವಿ ಪತಿ ಅಪಾಯದಿಂದ ಪಾರಾಗಿದ್ದಾರೆ.
ಕುಡುಪು ಭಾಗಕ್ಕೆ ತೆರಳುತ್ತಿದ್ದ 22ನೇ ನಂಬರ್ ಖಾಸಗಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದ್ದು, ಈ ವೇಳೆ ರಸ್ತೆಗೆ ಬಿದ್ದ ದೀಪ್ತಿ ಹೊಟ್ಟೆ ಮೇಲೆ ಬಸ್ ಚಕ್ರ ಹರಿದಿದೆ. ಗಂಭೀರಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ.
ಖಾಸಗಿ ಬಸ್ಗಳ ಆರ್ಭಟ ಖಂಡಿಸಿ ಆ್ಯಂಬುಲೆನ್ಸ್ನಲ್ಲಿ ಮೃತದೇಹವನ್ನು ಠಾಣೆ ಬಳಿಗೆ ತಂದು ದೀಪ್ತಿ ಸಂಬಂಧಿಕರು, ಸಾರ್ವಜನಿಕರರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ, ಮಂಗಳೂರಿನ ಕದ್ರಿ ಸಂಚಾರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವ ಯತ್ನ ಮಾಡಿದ್ದಾರೆ.
ಇದನ್ನೂ ಓದಿ : 42 ವರ್ಷಗಳ ಬಳಿಕ 100 ವರ್ಷದ ವೃದ್ಧ ಕೊಲೆ ಆರೋಪದಲ್ಲಿ ಖುಲಾಸೆ!



















