ರಾಜಸ್ಥಾನ : ರಾಜಸ್ಥಾನದಲ್ಲಿ ಖಾಸಗಿ ಬಸ್‌ಗೆ ವಿದ್ಯೂತ್ ಸ್ಪರ್ಶಿಸಿ ಬೆಂಕಿ ಹೊತ್ತಿಕೊಂಡು ಇಬ್ಬರು ಮೃತ ಪಟ್ಟಿದ್ದು, 10 ಮಂದಿಗೆ ಗಾಯವಾಗಿದೆ. ಈ ಹಿಂದೆ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಇಂತಹದ್ದೇ ಒಂದು ಘಟನೆ ಸಂಭವಿಸಿತ್ತು.
ಇಲ್ಲಿನ ಮನೋಹರ್‌ಪುರ ಪ್ರದೇಶದಲ್ಲಿ ಖಾಸಗಿ ಬಸ್‌ಗೆ ವಿದ್ಯುತ್ ತಂತಿ ತಗುಲಿದೆ. ಇದರಿಂದ ಬೆಂಕಿ ಹೊತ್ತಿಕೊಂಡಿದ್ದು, ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಉತ್ತರ ಪ್ರದೇಶದ ಪಿಲಿಭಿತ್‌ನಿಂದ ತೆರಳಿದ್ದ ಬಸ್ ಮನೋಹರ್‌ಪುರದ ಇಟ್ಟಿಗೆ ಬಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಕರೆತರುತ್ತಿತ್ತು. ಈ ವೇಳೆ ಮನೋಹರ್‌ಪುರದ ಹಳ್ಳಿಯೊಂದರ ಬಳಿ ಕಚ್ಚಾ ರಸ್ತೆಯಲ್ಲಿ ಸಾಗುತ್ತಿದ್ದಾಗ, ನೇತಾಡುತ್ತಿದ್ದ ವಿದ್ಯುತ್ ತಂತಿ ಬಸ್‌ನ ಮೇಲ್ಭಾಗದಲ್ಲಿ ಇರಿಸಲಾಗಿದ್ದ ಗ್ಯಾಸ್ ಸಿಲಿಂಡರ್‌ಗಳು ಮತ್ತು ಇತರ ಗೃಹೋಪಯೋಗಿ ವಸ್ತುಗಳಿಗೆ ತಾಗಿದೆ. ಘರ್ಷಣೆಯಿಂದ ಹಠಾತ್ತನೇ ವಿದ್ಯುತ್ ಸ್ಪರ್ಶವಾಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತೇಜ್‌ಪಾಲ್ ಸಿಂಗ್ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಒಳಗಿದ್ದ ಕಾರ್ಮಿಕರು ಬಸ್‌ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ, ಇಬ್ಬರು ಬೆಂಕಿ ಮತ್ತು ವಿದ್ಯುತ್ ಸ್ಪರ್ಶಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಗಾಯಗೊಂಡ 10 ಮಂದಿ ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ : ದೆಹಲಿ ಏರ್ಪೋರ್ಟ್ನಲ್ಲಿ ಧಗಧಗನೆ ಹೊತ್ತಿ ಉರಿದ ಏರ್ ಇಂಡಿಯಾ ಬಸ್ | ತಪ್ಪಿದ ಭಾರಿ ಅನಾಹುತ!


















