ಕರಾವಳಿ ಜಿಲ್ಲೆಗಳು ಟೆಂಪಲ್ ಟೂರಿಸಂಗೆ ಪೂರಕವಾಗಿದ್ದು ಇಲ್ಲಿನ ಧಾರ್ಮಿಕ ಪ್ರವಾಸೋದ್ಯಮ ಅಭಿವೃದ್ಧಿ, ಅವಕಾಶಗಳ ಬಗ್ಗೆ ಪ್ರವಾಸೋದ್ಯಮ ಸಚಿವರ ಗಮನ ಸೆಳೆದು ಬೆಂಗಳೂರು, ಮೈಸೂರು ಮಾದರಿಯಲ್ಲಿ ಟೆಂಪಲ್ ಟೂರಿಸಂಗೆ ಒತ್ತು ನೀಡಿ, ಬಿಎಂಟಿಸಿ, ಕೆಎಸ್ಸಾರ್ಟಿಸಿ ಬಸ್‌ಗಳನ್ನು ಒದಗಿಸಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿಗಳು, ಕೆಎಸ್ಸಾರ್ಟಿಸಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸದಲ್ಲಿದ್ದ ವೇಳೆ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಮತ್ತು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಸಚಿವರು ಮಾತನಾಡಿ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಧಾರ್ಮಿಕ ಕೇಂದ್ರಗಳಿವೆ. ಇಲ್ಲಿರುವಷ್ಟು ದೇವಸ್ಥಾನಗಳು ಬೇರೆ ಯಾವ ಪ್ರದೇಶದಲ್ಲೂ ಕಾಣಸಿಗದು ಎಂದಿದ್ದಾರೆ.
ಕರಾವಳಿಯ ಧಾರ್ಮಿಕ ಕ್ಷೇತ್ರಗಳಿಗೆ ದೇಶ-ವಿದೇಶಗಳಿಂದ ಭಕ್ತರು ಆಗಮಿಸುತ್ತಿರುತ್ತಾರೆ. ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನವು ದಸರಾ ವೈಭವದ ಮೂಲಕ ವಿಶ್ವ ಪ್ರಸಿದ್ಧಿ ಗಳಿಸುತ್ತಿದ್ದರೆ, ಮಾರಿಗುಡಿ ದೇವಸ್ಥಾನವು ಸಮಗ್ರ ಜೀರ್ಣೋದ್ದಾರದ ಮೂಲಕ ದೇಶ-ವಿದೇಶಗಳ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ದೇವಸ್ಥಾನಗಳನ್ನು ಕೇಂದ್ರಿಕರಿಸಿಕೊಂಡು ಒಂದು ದಿನದ ಪ್ರವಾಸಕ್ಕಾಗಿ ಟೆಂಪಲ್ ಟೂರಿಸಂಗೆ ಯೋಜನೆ ಹಾಕಿಕೊಳ್ಳಲಾಗುವುದು ಎಂದವರು ಹೇಳಿದ್ಧಾರೆ.


















