ಉಡುಪಿ : ಕರಾವಳಿಯ ಹಲವು ಪುರಾತತ್ವ ನಿವೇಶನಗಳು ಚಾರಿತ್ರಿಕವಾಗಿ ರಾಷ್ಟ್ರೀಯ ಮಹತ್ವವನ್ನು ಹೊಂದಿದ್ದು, ಅವುಗಳ ಸಂರಕ್ಷಣೆ ತುರ್ತು ಅಗತ್ಯವಾಗಿದೆ. ಅದಕ್ಕಾಗಿ ಈ ನಿವೇಶನಗಳನ್ನು ಅಧಿಸೂಚಿತ ನಿವೇಶನಗಳೆಂದು ಘೋಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಉಡುಪಿ ಆದಿಮ ಕಲಾ ಟ್ರಸ್ಟ್ ಸಂಚಾಲಕ ಪ್ರೊ.ಟಿ. ಮುರುಗೇಶಿ ಅವರು ಮೈಸೂರಿನ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯದ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ಕರಾವಳಿಯ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನಲ್ಲಿರುವ ಅವಲಕ್ಕಿಪಾರೆ, ಬುದ್ಧನಜೆಡ್ಡು, ಗಾವಳಿ, ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಬರದಕಲ್ಲು ಬೋಳೆ, ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಮದ್ಮಲ್‍ಪಾದೆ, ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆ ತಾಲ್ಲೂಕಿನಲ್ಲಿರುವ ಮೂಡುಕೋಣಾಜೆಯನ್ನು ಅಧಿಸೂಚಿತ ನಿವೇಶನಗಳೆಂದು ಘೋಷಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿರುವ ಈ 6 ನಿವೇಶನಗಳು ಪುರಾತತ್ವ, ಇತಿಹಾಸದ ಅಧ್ಯಯನಕ್ಕೆ ಉತ್ತಮ ತಾಣಗಳಾಗಿದ್ದು, ಚಾರಿತ್ರಿಕವಾಗಿ ರಾಷ್ಟ್ರೀಯ ಮಹತ್ವವನ್ನು ಹೊಂದಿರುವ ನಿವೇಶನಗಳಾಗಿವೆ. ಇವುಗಳ ಸಂರಕ್ಷಣೆಗೆ ತುರ್ತು ಗಮನ ಹರಿಸಬೇಕಾದ ಹಿನ್ನೆಲೆಯಲ್ಲಿ ಇವುಗಳನ್ನು ಅಧಿಸೂಚಿತ ನಿವೇಶನಗಳಾಗಿ ಘೋಷಿಸುವ ಅಗತ್ಯವಿದೆ ಎಂದು ಆದಿಮ ಕಲಾ ಟ್ರಸ್ಟ್‌ನ ಸ್ಥಾಪಕ ಸಂಚಾಲಕರಾಗಿರುವ, ಶಿರ್ವ ಕಾಲೇಜಿನ ನಿವೃತ್ತ ಇತಿಹಾಸ ಪ್ರಾದ್ಯಾಪಕ ಹಾಗೂ ಪುರಾತತ್ವ ಸಂಶೋಧಕ ಪ್ರೊ.ಟಿ.ಮುರುಗೇಶಿ ಸಂಸ್ಥೆಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ : ದೆಹಲಿ ಸ್ಫೋಟದ ಸಂಚುಕೋರರನ್ನು ಸುಮ್ಮನೆ ಬಿಡಲ್ಲ: ಭೂತಾನ್‌ನಿಂದಲೇ ಪ್ರಧಾನಿ ಮೋದಿ ಖಡಕ್ ಎಚ್ಚರಿಕೆ



















