ಮುಂಬೈ : ಮುಂಬೈನ ದೀರ್ಘ ಕಾಯುವಿಕೆ ಈಡೇರಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ ಅತ್ಯಾಧುನಿಕ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ್ದು, ಇದು ಭಾರತದ ವಿಮಾನಯಾನ ಮೂಲಸೌಕರ್ಯಕ್ಕೆ ದೊಡ್ಡ ಉತ್ತೇಜನ ನೀಡಲಿದೆ.
ಈ ಹೊಸ ವಿಮಾನ ನಿಲ್ದಾಣವು ಮುಂಬೈನ ಪ್ರಸ್ತುತ ವಿಮಾನ ನಿಲ್ದಾಣದೊಂದಿಗೆ ಕಾರ್ಯನಿರ್ವಹಿಸಲಿದ್ದು, ಇದರಿಂದ ವಿಮಾನಗಳ ದಟ್ಟಣೆ ಕಡಿಮೆಯಾಗಿ, ಮುಂಬೈ ಜಾಗತಿಕ ಮಟ್ಟದ ಬಹುವಿಮಾನ ನಿಲ್ದಾಣಗಳ ನಗರಗಳ ಪಟ್ಟಿಗೆ ಸೇರಲಿದೆ.

ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ನಿರ್ಮಿಸಲಾಗಿದ್ದು, ಇದುವರೆಗಿನ ಭಾರತದ ಅತಿದೊಡ್ಡ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಯೋಜನೆಯಾಗಿದೆ. ಇದು 1,160 ಹೆಕ್ಟೇರ್ ಪ್ರದೇಶದಲ್ಲಿ ವಿಸ್ತರಿಸಿದ್ದು, ವಾರ್ಷಿಕ 90 ಮಿಲಿಯನ್ ಪ್ರಯಾಣಿಕರನ್ನು ಮತ್ತು 3.25 ಮಿಲಿಯನ್ ಮೆಟ್ರಿಕ್ ಟನ್ ಸರಕನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
ಉದ್ಘಾಟನೆಗೂ ಮೊದಲು ಮೋದಿ ವಿಮಾನ ನಿಲ್ದಾಣ ವೀಕ್ಷಣೆ ಮಾಡಿದ್ದು, ಈ ವೇಳೆ ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮಮೋಹನ್ ನಾಯ್ಡು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಉಪಸ್ಥಿತರಿದ್ದರು.