ವಾಷಿಂಗ್ಟನ್: ಫೆಬ್ರವರಿ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಈ ಮಾಹಿತಿ ನೀಡಿದ್ದಾರೆ. ಸೋಮವಾರ ರಾತ್ರಿ ಉಭಯ ನಾಯಕರು ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದಾರೆ. ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವೆ ಮಾತುಕತೆ ನಡೆದಿದೆ.
ಬಳಿಕ ಅಮೆರಿಕದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಟ್ರಂಪ್, “ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ದೀರ್ಘ ಮಾತುಕತೆ ನಡೆಸಿದ್ದೇನೆ. ಮುಂದಿನ ತಿಂಗಳಲ್ಲೇ ಅವರು ಶ್ವೇತಭವನಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ನಮಗೆ ಭಾರತದೊಂದಿಗೆ ಅತ್ಯುತ್ತಮ ಬಾಂಧವ್ಯವಿದೆ” ಎಂದು ಹೇಳಿದ್ದಾರೆ. ಜೊತೆಗೆ ಮೋದಿಯವರೊಂದಿಗಿನ ಫೋನ್ ಸಂಭಾಷಣೆ ವೇಳೆ ಎಲ್ಲ ವಿಚಾರಗಳ ಬಗ್ಗೆಯೂ ಮಾತುಕತೆ ನಡೆದಿದೆ ಎಂದೂ ಹೇಳಿದ್ದಾರೆ.
ಇನ್ನೊಂದೆಡೆ ಶ್ವೇತಭವನವೂ ಟ್ರಂಪ್-ಮೋದಿ ಸಂಭಾಷಣೆ ಕುರಿತು ಪ್ರಕಟಣೆ ಹೊರಡಿಸಿದ್ದು, ಎರಡೂ ರಾಷ್ಟ್ರಗಳ ನಡುವಿನ ಸಹಕಾರವನ್ನು ವಿಸ್ತರಿಸುವ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ. ಅಲ್ಲದೇ ಇಂಡೋ-ಪೆಸಿಫಿಕ್ ಭದ್ರತೆ, ಮಧ್ಯಪ್ರಾಚ್ಯ ಮತ್ತು ಯುರೋಪ್ ಪರಿಸ್ಥಿತಿ, ಪ್ರಾದೇಶಿಕ ವಿಚಾರಗಳ ಕುರಿತೂ ಚರ್ಚೆ ನಡೆದಿದೆ. ಒಟ್ಟಿನಲ್ಲಿ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ಮೋದಿಯವರೊಂದಿಗೆ ಫಲಪ್ರದ ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದೆ.
ಇತ್ತ ಪ್ರಧಾನಿ ಮೋದಿಯವರೂ ಟ್ವೀಟ್ ಮಾಡಿ, ನನ್ನ ಆತ್ಮೀಯ ಸ್ನೇಹಿತ ಟ್ರಂಪ್ ಅವರೊಂದಿಗೆ ಮಾತನಾಡಿ ಬಹಳ ಸಂತೋಷವಾಗಿದೆ. ಉಭಯ ರಾಷ್ಟ್ರಗಳು ಪರಸ್ಪರ ಅನುಕೂಲಕರ ಮತ್ತು ವಿಶ್ವಾಸಾರ್ಹ ಪಾಲುದಾರಿಕೆಗೆ ಬದ್ಧವಾಗಿವೆ. ನಮ್ಮ ನಾಗರಿಕರ ಕ್ಷೇಮಾಭಿವೃದ್ಧಿ ಮತ್ತು ಜಾಗತಿಕ ಶಾಂತಿ, ಸಮೃದ್ಧಿ ಹಾಗೂ ಭದ್ರತೆಗಾಗಿ ನಾವು ಒಂದಾಗಿ ಶ್ರಮಿಸಲಿದ್ದೇವೆ ಎಂದು ಬರೆದುಕೊಂಡಿದ್ದಾರೆ. ದೂರವಾಣಿ ಸಂಭಾಷಣೆ ವೇಳೆ ಉಭಯ ನಾಯಕರು ಭಾರತ ಮತ್ತು ಅಮೆರಿಕ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.