ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದಲ್ಲಿ 10 ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ ಪಕ್ಷವು ಯಾವಾಗಲೂ ಸಮಾಜವನ್ನು ಜಾತಿ ಆಧಾರದಲ್ಲಿ ವಿಭಜಿಸಲು ಯತ್ನಿಸುತ್ತಿದೆ. ಅಲ್ಲದೇ, ದೇಶದಲ್ಲಿ ಹಿಂದೂಗಳ ಮಧ್ಯೆ ಜಗಳ ಪ್ರಚೋದಿಸಲು ಕಾಂಗ್ರೆಸ್ ಯಾವ ಪ್ರಯತ್ನವನ್ನೂ ಬಿಡುವುದಿಲ್ಲ. ಸರ್ವಜನ್ ಹಿತಯೇ, ಸರ್ವಜನ್ ಸುಖಯೇ’ ಎಂಬ ಸನಾತನ ಪರಿಕಲ್ಪನೆಯನ್ನು ಕಾಂಗ್ರೆಸ್ ಯಾವಾಗಲೂ ವಿಫಲಗೊಳಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹರಿಯಾಣದಲ್ಲಿ ರೈತರು, ದಲಿತರು ಹಾಗೂ ಯುವಕರನ್ನು ದಾರಿ ತಪ್ಪಿಸಲು ಕಾಂಗ್ರೆಸ್ ಎಲ್ಲ ರೀತಿಯ ಪ್ರಯತ್ನ ಮಾಡಿದೆ. ಆದರೆ, ಇದಕ್ಕೆ ಸಾರ್ವಜನಿಕರು ತಕ್ಕ ಪಾಠ ಕಲಿಸಿದ್ದಾರೆ. ಕಾಂಗ್ರೆಸ್ ದೇಶದಲ್ಲಿ ಜಾತೀಯತೆ ಮತ್ತು ಕೋಮುವಾದವನ್ನು ಕಾಂಗ್ರೆಸ್ ಉತ್ತೇಜಿಸುತ್ತಿದೆ. ಸಮಾಜ ಒಡೆಯುವುದನ್ನೇ ಕಾಯಕ ಮಾಡಿಕೊಂಡಿದೆ. ಹೀಗಾಗಿ ಜನರು ಎಲ್ಲೆಡೆ ತಕ್ಕ ಪಾಠ ಕಲಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು, ಮುಂಬೈ, ನಾಸಿಕ್, ಜಲ್ನಾ, ಅಮರಾವತಿ, ಗಡ್ಚಿರೋಲಿ, ಬುಲ್ಧಾನ, ವಾಶಿಮ್, ಭಂಡಾರಾ, ಹಿಂಗೋಲಿ ಮತ್ತು ಅಂಬರನಾಥ್ (ಥಾಣೆ)ಗಳಲ್ಲಿ 10 ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಿದರು.
ಶಿರಡಿ ವಿಮಾನ ನಿಲ್ದಾಣದಲ್ಲಿ 645 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು.