ಭಕ್ತರನ್ನು ಬಿಡುವ ವಿಚಾರದಲ್ಲಿ ಅರ್ಚಕರ ಮಧ್ಯೆಯೇ ಜಗಳ ನಡೆದಿದ್ದು, ಪರಸ್ಪರ ಬಡಿದಾಡಿಕೊಂಡಿದ್ದಾರೆ.
ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಗಾಣಗಾಪುರದ ಗುರು ದತ್ತಾತ್ರೇಯ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ದೇವಸ್ಥಾನದ ಗರ್ಭಗುಡಿಯಲ್ಲಿ ಅರ್ಚಕರು ಬಡಿದಾಡಿಕೊಂಡಿದ್ದಾರೆ. ಭಕ್ತರ ಸಾಲು ಬಿಡುವ ವಿಚಾರದಲ್ಲಿ ಇಬ್ಬರು ಅರ್ಚಕರ ಮಧ್ಯೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಇಬ್ಬರೂ ಬಡಿದಾಡಿಕೊಂಡಿದ್ದಾರೆ.
ಅರ್ಚಕರಾದ ಕಿರಣ್ ಭಟ್ ಪೂಜಾರಿ ಮತ್ತು ವಲ್ಲಭಟ್ ಪೂಜಾರಿ ಮಧ್ಯೆ ಮಾರಮಾರಿ ನಡೆದಿದೆ. ಈ ಜಗಳ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಮ್ಮ ಕಡೆಯ ಭಕ್ತರನ್ನು ಮೊದಲು ಬಿಡಬೇಕು ಎಂಬ ವಿಚಾರದಲ್ಲಿ ಇಬ್ಬರ ಮಧ್ಯೆ ವಾಗ್ವಾದ ಉಂಟಾಗಿದೆ ಎನ್ನಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.