ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಮ್ಮ ಮೆಟ್ರೋ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಮೆಟ್ರೋ (Namma Metro) ಜಾಲ ವಿಸ್ತರಣೆ ಆಗುತ್ತಿದೆ. ಹೀಗಾಗಿ ಟಿಕೆಟ್ ದರ ಏರಿಕೆಗೆ ಬಿಎಂಆರ್ಸಿಎಲ್ ಬೋರ್ಡ್ ಮುಂದಾಗಿದೆ. ಟಿಕೆಟ್ ದರ ಏರಿಕೆಯಾಗಿರುವ ಕುರಿತು ನಾಳೆ ಅಧಿಕೃತ ಘೋಷಣೆಯಾಗಲಿದೆ. ಈ ಮೂಲಕ ಪ್ರಯಾಣಿಕರಿಗೆ ಮತ್ತೊಂದು ಶಾಕ್ ಎದುರಾಗಿದೆ.
ಶಾಂತಿನಗರದ ಬಿಎಂಆರ್ಸಿಎಲ್ ಮುಖ್ಯ ಕಚೇರಿಯಲ್ಲಿ ದರ ಏರಿಕೆಯ ವಿಚಾರವಾಗಿ ಇಂದು(ಜ. 17)ರಂದು ಸಭೆ ನಡೆಯಿತು. ಈ ವೇಳೆ ಟಿಕೆಟ್ ದರ ಏರಿಕೆ ಮಾಡುವ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಂಆರ್ಸಿಎಲ್ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚವ್ಹಾಣ್, ದರ ಏರಿಕೆಯ ಕುರಿತು ಒಪ್ಪಿಗೆ ಸೂಚಿಸಲಾಗಿದೆ. ನಾಳೆಗೆ ಅಧಿಕೃತ ಮಾಹಿತಿ ಘೋಷಣೆಯಾಗಲಿದೆ ಎಂದು ಹೇಳಿದ್ದಾರೆ.
ಯಾವತ್ತಿನಿಂದ ದರ ಜಾಸ್ತಿ ಮಾಡಬೇಕು ಎನ್ನುವ ಸಿದ್ದತೆಗೆ ಬಿಎಂಆರ್ಸಿಎಲ್ಗೆ ಬೋರ್ಡ್ ಸೂಚಿಸಿದ್ದು, ಅದರಂತೆ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಎಷ್ಟು ದರ ನಿಗದಿ ಮಾಡಬೇಕು ಎಂಬ ಕುರಿತು ನಾಳೆಗೆ ನಿರ್ಧಿರಿಸಿ ಬಿಎಂಆರ್ಸಿಎಲ್ ಮಾಹಿತಿ ನೀಡಲಿದೆ.
ಇತ್ತೀಚೆಗಷ್ಟೇ ಶೇ. 10 ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಬಿಎಂಆರ್ಸಿಎಲ್ ಮನವಿ ಮಾಡಿತ್ತು. ಆದರೆ ಶೇ. 40ರಿಂದ ಶೇ. 45ರಷ್ಟು ಟಿಕೆಟ್ ದರ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಗರಿಷ್ಠ 60 ರೂ. ಇದ್ದ ದರ 90 ರೂ. ವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.