ಮಂಡ್ಯ : ಸೆಪ್ಟೆಂಬರ್ 1ರಂದು ಮೈಸೂರಿಗೆ ಆಗಮಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 3 ತಿಂಗಳ ಬಳಿಕ ಮತ್ತೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಡಿಸೆಂಬರ್ 16ರಂದು ಅವರು ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆಯಲಿರುವ ಆದಿ ಜಗದ್ಗುರು ಶಿವರಾತ್ರೀಶ್ವರ ಶ್ರೀಗಳ 1066ನೇ ಜಯಂತಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆ ಮಳವಳ್ಳಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಮಳವಳ್ಳಿಯಲ್ಲಿ ಡಿಸೆಂಬರ್ 16ರಿಂದ 21ರವರೆಗೆ ಆದಿ ಜಗದ್ಗುರು ಶಿವರಾತ್ರೀಶ್ವರ ಶ್ರೀಗಳ 1066ನೇ ಜಯಂತಿ ಮಹೋತ್ಸವವನ್ನು ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಳವಳ್ಳಿಯ ಮುನ್ಸಿಪಲ್ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಡಿಸೆಂಬರ್ 16ರ ಮಧ್ಯಾಹ್ನ 2.10ಕ್ಕೆ ಮೈಸೂರಿನ ಏರ್ಪೋರ್ಟ್ಗೆ ಆಗಮಿಸಲಿರುವ ದ್ರೌಪದಿ ಮುರ್ಮು, ಬಳಿಕ ಹೆಲಿಕಾಪ್ಟರ್ನಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿಗೆ ತೆರಳಲಿದ್ದಾರೆ. ಬಳಿಕ ಮಳವಳ್ಳಿಯಲ್ಲಿ ನಡೆಯುವ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 5.25ಕ್ಕೆ ಮಳವಳ್ಳಿಯಿಂದ ಮೈಸೂರಿಗೆ ಹಿಂದಿರುಗುವ ರಾಷ್ಟ್ರಪತಿ ರಾತ್ರಿ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಡಿಸೆಂಬರ್ 17ರ ಬೆಳಗ್ಗೆ 9.25ಕ್ಕೆ ಮೈಸೂರಿನಿಂದ ತಿರುಪತಿಗೆ ಹಿಂದಿರುಗಲಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಡ್ಯ ಜಿಲ್ಲೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ಕುಮಾರ್ ಅಧಿಕಾರಿಗಳೊಂದಿಗೆ ಸಭೆ ಮಾಡಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ಕಾಗದದ ಮೇಲೆ ಹುಟ್ಟಿದ ಪಾತ್ರ ನಟರ ಮೂಲಕ ಜೀವ ಪಡೆದಾಗ.. ‘ಕಾಂತಾರ’ದ ಆತ್ಮಕಥೆ ಬಿಚ್ಚಿಟ್ಟ ರಿಷಬ್ ಶೆಟ್ಟಿ



















