ಬೆಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣ (Dharmasthala Mass Burial Case) ರಾಜ್ಯದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಈ ವಿಷಯವಾಗಿ ಈಗಾಗಲೇ ಎಸ್ ಐಟಿ ತನಿಖೆ ನಡೆಸುತ್ತಿದ್ದು, ಅನಾಮಿಕ ಹೇಳಿದ 17 ಸ್ಥಳಗಳಲ್ಲೂ ಯಾವುದೇ ಅಸ್ಥಿ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮಾಸ್ಕ್ ಮ್ಯಾನ್ ಹಿಂದಿರುವ ವ್ಯಕ್ತಿಗಳಿಗೆ ನೋಟಿಸ್ ನೀಡಲು ಎಸ್ ಐಟಿ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ.
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ನಿಗೂಢ ಪ್ರಕರಣ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. 15 ದಿನಗಳ ಕಾಲ ಭಾರೀ ಮಳೆಯ ನಡುವೆಯೂ 17 ಪಾಯಿಂಟ್‌ಗಳಲ್ಲಿ ಉತ್ಖನನ ನಡೆಸಿದರೂ ಅನಾಮಿಕ ಮಾಸ್ಕ್ ಮ್ಯಾನ್ ಹೇಳಿದ್ದ 6ನೇ ಪಾಯಿಂಟ್ ಬಿಟ್ಟು ಬೇರೆಡೆ ಯಾವುದೇ ಹೂತಿಟ್ಟ ಮೂಳೆ ಸಿಕ್ಕಿಲ್ಲ. ಈಗ ಮತ್ತೆ ಪಾಯಿಂಟ್ ತೋರಿಸುತ್ತೇನೆ ಎಂದು ಆತ ಹೇಳಿದ್ದು, ಆತನ ವಿಚಾರಣೆ ನಡೆಸಲಾಗುತ್ತಿದೆ. ಆತ ನೀಡಿರುವ ದೂರು ಸುಳ್ಳು ಎಂದು ಭಾವಿಸಿರುವ ಎಸ್ ಐಟಿ ಅಧಿಕಾರಿಗಳು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಅಲ್ಲದೇ, ಇದರ ಹಿಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ನೋಟಿಸ್ ನೀಡಲು ಕೂಡ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಈ ವಿಚಾರ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.



















