ಬೆಂಗಳೂರು: ಕೊರೊನಾ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಜಾನ್ ಮೂಕಲ್ ಡಿ.ಮೈಕಲ್ ಕುನ್ಹಾ ಆಯೋಗದಿಂದ ಅಕ್ರಮ ನಡೆದಿರುವುದು ಸಾಬೀತಾಗಿದ್ದು, ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಬಿ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ ಗೆ ಆಯೋಗ ಶಿಫಾರಸ್ಸು ಮಾಡಿದ ಬೆನ್ನೆಲ್ಲೇ ಇದೀಗ ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಪೊಲೀಸರೊಂದಿಗೆ ಚರ್ಚೆ ನಡೆಸಿದ್ದಾರೆ. ನ್ಯಾ.ಜಾನ್ ಮೈಕೆಲ್ ಡಿ.ಕುನ್ಹಾ ಸಮಿತಿ ಶಿಫಾರಸು ಆಧರಿಸಿ ಕೇಸ್ ಸಾಧ್ಯತೆ ಇದೆ. ಈ ಕುರಿತು ಗೃಹ ಸಚಿವಾಲಯ ಪೂರಕ ದಾಖಲೆ ಸಂಗ್ರಹ ಕೆಲಸ ಮಾಡುತ್ತಿದೆ ಎನ್ನಲಾಗಿದೆ.
ಕೋವಿಡ್ ವಿರುದ್ಧ ಹೋರಾಡುವ ನೆಪದಲ್ಲಿ ಸರ್ಕಾರ ಕೋಟಿ ಕೋಟಿ ಹಣ ಲೂಟಿ ಮಾಡಿರೋದಾಗಿ ವಿಪಕ್ಷದಲ್ಲಿದ್ದ ಕಾಂಗ್ರೆಸ್ ಆರೋಪ ಮಾಡಿತ್ತು. ಕೈ ಪಡೆಯ ಹೋರಾಟ ಬರೀ ಆರೋಪಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. 2023ರಲ್ಲಿ ಅಧಿಕಾರಕ್ಕೆ ಬಂದಿದ್ದೇ ತಡ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ಅವರ ನೇತೃತ್ವದಲ್ಲಿ ಆಯೋಗವನ್ನು ಸ್ಥಾಪನೆ ಮಾಡಿತ್ತು. ಸದ್ಯ ಈ ವರದಿ ನಾಯಕರಿಬ್ಬರಿಗೆ ಸಂಕಷ್ಟ ತಂದಿದೆ.