ರಾಯಚೂರು : ಮಂತ್ರಾಲಯದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಕೊನೆಯ ಘಟ್ಟವಾದ ಉತ್ತರಾರಾಧನೆಗೆ ರಾಯರ ಮಠ ಸಿದ್ಧಗೊಂಡಿದ್ದು, ಮಠದ ರಾಜಬೀದಿಯಲ್ಲಿ ಇಂದು(ಮಂಗಳವಾರ) ಮಹಾರಥೋತ್ಸವ ನಡೆಯಲಿದೆ.
ಕಲಿಯುಗದ ಕಾಮಧೇನು ಗುರು ರಾಘವೇಂದ್ರ ಸ್ವಾಮಿಗಳು ವೃಂದಾವನಸ್ಥರಾದ ಮರುದಿನವನ್ನು ಮಂತ್ರಾಲಯದಲ್ಲಿ ಉತ್ತರಾರಾಧನೆಯಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. ರಾಯರ ಉತ್ತರಾರಾಧನೆ ಹಿನ್ನೆಲೆ ಮಂತ್ರಾಲಯ ಮಠದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಈ ದಿನ ರಾಯರು ಪ್ರಹ್ಲಾದ ರಾಜರ ಉತ್ಸವಮೂರ್ತಿ ರೂಪದಿಂದ ಹೊರ ಪ್ರಾಕಾರದಲ್ಲಿ ಬಂದು ಭಕ್ತರಿಗೆ ರಾಜಬೀದಿಯಲ್ಲಿ ದರ್ಶನ ನೀಡುತ್ತಾರೆ ಎನ್ನುವ ಪ್ರತೀತಿಯಿದೆ.
ಹೈದರಬಾದ್ ಮೂಲದ ಭಕ್ತರು ನೀಡಿರುವ ನವರತ್ನ ಕವಚವನ್ನು, ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ರಾಯರಿಗೆ ಇಂದು ಸಮರ್ಪಣೆ ಮಾಡಲಿದ್ದಾರೆ. ಮಹಾರಥೋತ್ಸವಕ್ಕೂ ಮುನ್ನ ರಾಮದೇವರು ಮತ್ತು ಎಲ್ಲಾ ಬೃಂದಾವನಗಳಿಗೂ ಗುಲಾಲ್ ಸಮರ್ಪಣೆ ಮಾಡುವ ಮೂಲಕ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ರಂಗಿನ ಹಬ್ಬ ವಸಂತೋತ್ಸವ ಆಚರಿಸುತ್ತಾರೆ. ಬಳಿಕ ಗುರುರಾಯರನ್ನು ಪ್ರಹ್ಲಾದ ರಾಜರ ರೂಪದಲ್ಲಿ ಸಂಸ್ಕೃತ ಪಾಠಶಾಲೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ನಂತರ ಮಠದ ಮಧ್ವದ್ವಾರದ ಮೂಲಕ ರಾಜಬೀದಿಯಲ್ಲಿ ಮಹಾರಥೋತ್ಸವ ನಡೆಯುತ್ತದೆ.
ರಾಯರು ಪ್ರತಿನಿತ್ಯದಲ್ಲಿ ಅಂತರ್ಮುಖವಾಗಿ ಜಪತಪ ಮಾಡುತ್ತಿದ್ದರೆ. ಉತ್ತರಾರಾಧನೆ ದಿನ ಬಹಿರ್ಮುಖವಾಗಿ ತಮ್ಮ ದೃಷ್ಟಿಯನ್ನು ಭಕ್ತರ ಕಡೆಗೆ ಹರಿಸುತ್ತಾರೆ. ಭಕ್ತರ ಬೇಡಿಕೆ ಈಡೇರಿಸುತ್ತಾರೆ ಎನ್ನುವ ನಂಬಿಕೆಯಿದೆ. ಹೀಗಾಗಿ ಉತ್ತರಾಧನೆ ದಿನ ರಾಯರ ಅನುಗ್ರಹಕ್ಕೆ ಪಾತ್ರರಾಗಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ರಾಯರ ಮಠಕ್ಕೆ ಆಗಮಿಸಿ ಮಹಾರಥೋತ್ಸವದಲ್ಲಿ ಭಾಗಿಯಾಗಿಯಾಗುತ್ತಾರೆ.
ವಿವಿಧೆಡೆಯಿಂದ ಆಗಮಿಸಿರುವ ಭಜನಾ ಮಂಡಳಿಗಳು, ಕಲಾತಂಡಗಳು ರಾಜಬೀದಿಯಲ್ಲಿ ರಥೋತ್ಸವಕ್ಕೆ ಮೆರಗು ನೀಡಲು ಸಿದ್ಧವಾಗಿವೆ. ಹೆಲಿಕಾಪ್ಟರ್ ಮೂಲಕ ಪ್ರತಿ ವರ್ಷದಂತೆ ರಥಕ್ಕೆ ಪುಷ್ಪವೃಷ್ಟಿಯನ್ನು ಮಾಡಲಾಗುತ್ತದೆ. ಈ ಮೂಲಕ ರಾಯರ ಆರಾಧನೆಯ ಮುಖ್ಯ ಮೂರು ದಿನಗಳು ಮುಕ್ತಾಯವಾಗುತ್ತವೆ.



















