ಮೈಸೂರು: ವಿಶ್ವ ಪ್ರಸಿದ್ಧ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಹೀಗಾಗಿ ಸಕಲ ತಯಾರಿ ನಡೆದಿದೆ.
ಅಂಬಾವಿಲಾಸ ಅರಮನೆಯಲ್ಲಿ ಅ.3 ರಿಂದ ಖಾಸಗಿ ದರ್ಬಾರ್ ಆರಂಭವಾಗಲಿದೆ. ಹೀಗಾಗಿ ಖಾಸಗಿ ದರ್ಬಾರ್ ಗೆ ಭರದ ಸಿದ್ಧತೆ ನಡೆಯುತ್ತಿದೆ. ನವರಾತ್ರಿ ಹಿನ್ನೆಲೆಯಲ್ಲಿ ರಾಜವಂಶಸ್ಥರಿಂದ ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯಲಿದೆ.
ಸೆಪ್ಟೆಂಬರ್ 27 ರಂದು (ಇಂದು) ಬೆಳಿಗ್ಗೆ 7.30 ಕ್ಕೆ ನವಗ್ರಹ ಹೋಮ ಮತ್ತು ಶಾಂತಿ ಪೂಜೆ ಮಾಡುವ ಮೂಲಕ ರಾಜಮನೆತನದ ಧಾರ್ಮಿಕ ವಿಧಿಗಳಿಗೆ ಚಾಲನೆ ನೀಡಲಾಯಿತು. ಬಳಿಕ 9.55 ರಿಂದ 10.25 ರ ಒಳಗೆ ಅರಮನೆಯ ದರ್ಬಾರ್ ಹಾಲ್ ನಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯ ನೆರವೇರಿಕೆ ಆಯಿತು. ಪಟ್ಟದ ಹಸು, ಕುದುರೆ, ಆನೆ, ಅಶ್ವಗಳು ಗೋ ಶಾಲೆಗೆ ಆಗಮಿಸಿದವು.
ಭದ್ರಕೋಣೆಯಲ್ಲಿರುವ ಸಿಂಹಾಸನವನ್ನು ಸ್ವಚ್ಛಗೊಳಿಸಿ ಟ್ರಾಲಿ ಮೂಲಕ ದರ್ಬಾರ್ ಹಾಲ್ ಗೆ ತರಲಾಗುತ್ತದೆ. ಸಿಂಹಾಸನದಲ್ಲಿ ಮೂರು ಭಾಗಗಳಿವೆ. ಒಂದು ಮುಖ್ಯ ಆಸನ, ಇನ್ನೊಂದು ಮೆಟ್ಟಿಲು ಮತ್ತು ಬಂಗಾರದ ಛತ್ರಿಯಿದೆ. ಮೂಲತಃ ಅಂಜೂರ ಮರದಿಂದ ತಯಾರಿಸಲಾಗಿರುವ ಈ ರಾಜಗದ್ದುಗೆಗೆ ಆನೆಯ ದಂತದ ಪಟ್ಟಿಗಳನ್ನು ಅಳವಡಿಸಲಾಗಿದೆ. ರಾಜ ಮಹಾರಾಜರ ಕಾಲದಿಂದಲೂ ನವರಾತ್ರಿ ಆರಂಭಕ್ಕೂ ಮೂರು ತಿಂಗಳ ಮೊದಲೇ ಅರಮನೆಯಿಂದ ಪರಿಚಾರಕರು ಗೆಜ್ಜಗಳ್ಳಿಗೆ ಹೋಗಿ ವೀಳ್ಯ ಕೊಟ್ಟು ಆಹ್ವಾನ ನೀಡಿ ಬರುತ್ತಿದ್ದರು. ಅವರು ರತ್ನ ಖಚಿತ ತಯಾರಿಸುತ್ತಿದ್ದರು.
ಆದರೆ, ಇತ್ತೀಚೆಗೆ ಅರಮನೆ ಸಿಬ್ಬಂದಿಯೇ ಸಿಂಹಾಸನ ಜೋಡಿಸುತ್ತಿದ್ದಾರೆ. ಅಕ್ಟೋಬರ್ 3 ರಂದು ನವರಾತ್ರಿಯ ಶುಭಾರಂಭದ ದಿನವಾಗಿದೆ. ಅಂದು ಮೊದಲಿಗೆ ಎಣ್ಣೆ ಶಾಸ್ತ್ರ ಕಾರ್ಯ ನೆರವೇರಲಿದೆ. ಬೆಳಿಗ್ಗೆ 5.45 ರಿಂದ 6.10 ರ ಒಳಗಿನ ಶುಭ ಮುಹೂರ್ತದಲ್ಲಿ ರತ್ನಖಚಿತ ಸಿಂಹಾಸನಕ್ಕೆ ಸಿಂಹದ ಮುಖ ಜೋಡಣೆ ಮಾಡಲಾಗುತ್ತದೆ. ಆನಂತರ ವಿವಿಧ ಕಾರ್ಯಕ್ರಮಗಳು ಜರುಗಲಿವೆ.