ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾನ ವಿಭಾಗದಲ್ಲಿ ಹುಲಿ ಹತ್ಯೆಯಾಗಿರುವ ಪ್ರಕರಣವು ವನ್ಯಜೀವಿ ಸಂರಕ್ಷಣೆಯ ಅಂಗಳದಲ್ಲಿ ಕರ್ನಾಟಕಕ್ಕೆ ದೊಡ್ಡ ನಷ್ಟವಾಗಿದೆ. ಇದೀಗ ಎಂಎಂಹಿಲ್ಸ್ ಹುಲಿ ಹತ್ಯೆಯ ಪ್ರಾಥಮಿಕ ಮಾಹಿತಿ ಹೊರಬಂದಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ತನಿಖೆಯ ಪ್ರಕಾರ ಹುಲಿಯ ಕೋರೆಹಲ್ಲುಗಳು ದುರ್ಬಲವಾಗಿದ್ದ ಕಾರಣ ಅದು ಜಾನುವಾರಗಳನ್ನು ಕೊಂದು ತಿಂದು ಬದುಕಿತ್ತು ಎಂದು ಶಂಕಿಸಲಾಗಿದೆ. ಹುಲಿಯ ಮೈಮೇಲೆ ಯಾವುದೇ ಗುಂಡು ತಾಕಿದ ಕಲೆಗಳು ಕಂಡುಬಂದಿಲ್ಲ ಎಂದು ಮರಣೋತ್ತರ ಪರೀಕ್ಷೆ ದೃಢಪಡಿಸಿದರೆ, ಮೃತಪಟ್ಟ ಹುಲಿಯಲ್ಲಿ ಯಾವುದೇ ಅಂಗಾಂಗ ಕಾಣೆಯಾಗಿಲ್ಲ, ಈ ಹುಲಿಯೂ ವಿಷ ಪ್ರಾಶನದಿಂದ ಮೃತಪಟ್ಟಿರಬಹುದೆಂದು ಎಂದು ವಿಧಿವಿಜ್ಞಾನ ಸಂಸ್ಥೆ ಸ್ಪಷ್ಠೀಕರಿಸಿದೆ.
ಈಗಾಗಲೇ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಮಿತಾ ಬಿಜ್ಜೂರು ನೇತೃತ್ವದ ತಂಡವು ಹನೂರು ತಲುಪಿದ್ದು, ತನಿಖೆ ಪ್ರಾರಂಭ ಮಾಡಿದೆ. ವನ್ಯಜೀವಿ ಅಪರಾಧ ನಿಯಂತ್ರಣ ಮಂಡಳಿ (WCCB) ಅಧಿಕಾರಿಗಳೂ ಇಂದು ಸ್ಥಳಕ್ಕೆ ಬೇಟಿನೀಡಿದ್ದಾರೆ. ಈ ಹುಲಿಯನ್ನು ಕೊಂದಿರುವ ಶಂಕಿತ ವ್ಯಕ್ತಿಯ ಬಗ್ಗೆ ಸುಳಿವು ಲಭ್ಯವಾಗಿದ್ದು, ಸದ್ಯ ಆತ ತಲೆಮರೆಸಿಕೊಂಡಿದ್ದಾನೆಂಬ ಮಾಹಿತಿ ಬಂದಿದೆ. ಶಂಕಿತನ ಬಂಧನಕ್ಕೆ ಕ್ರಮವಹಿಸಲಾಗಿದ್ದು, ಬಂಧನದ ಬಳಿಕ ಹತ್ಯೆಗೆ ನಿಜವಾದ ಕಾರಣ ತಿಳಿಯಲಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ.