ಬೆಂಗಳೂರು: ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಸಹ-ಮಾಲೀಕರಾದ ನಟಿ ಪ್ರೀತಿ ಝಿಂಟಾ (Preity Zinta) ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವ್ಯಕ್ತಿಯೊಬ್ಬರು ಗ್ಲೆನ್ ಮ್ಯಾಕ್ಸ್‌ವೆಲ್ ಕುರಿತು ಮಾಡಿದ ಅಸಭ್ಯ ಮತ್ತು ಲಿಂಗಾಧಾರಿತ ಕಾಮೆಂಟ್‌ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ಅಭಿಮಾನಿಯೊಬ್ಬರೊಂದಿಗೆ ಸಂವಾದ ನಡೆಸುತ್ತಿದ್ದಾಗ, ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಐಪಿಎಲ್ 2025ರಲ್ಲಿ ಪಂಜಾಬ್ ಕಿಂಗ್ಸ್ ಪರ ಕಳಪೆ ಪ್ರದರ್ಶನ ನೀಡಲು ಕಾರಣವೇನು ಎಂದು ವಿವರಿಸುತ್ತಾ, ಪ್ರೀತಿ ಜಿಂಟಾ ಅವರನ್ನು ಮದುವೆಯಾಗದಿರುವುದು ಅವರ ಮುಂದೆಯೇ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರೀತಿ ಝಿಂಟಾ, “ನೀವು ಈ ಪ್ರಶ್ನೆಯನ್ನು ಎಲ್ಲಾ ತಂಡಗಳ ಪುರುಷ ಮಾಲೀಕರಿಗೂ ಕೇಳುತ್ತೀರಾ ಅಥವಾ ಈ ತಾರತಮ್ಯ ಕೇವಲ ಮಹಿಳೆಯರ ವಿರುದ್ಧವೇ? ಕ್ರಿಕೆಟ್‌ಗೆ ಬಂದ ನಂತರವೇ ಕಾರ್ಪೊರೇಟ್ ವಲಯದಲ್ಲಿ ಮಹಿಳೆಯರಿಗೆ ಎದುರಾಗುವ ತೊಂದರೆಗಳ ಬಗ್ಗೆ ನನಗೆ ತಿಳಿದಿದೆ. ನೀವು ಈ ಪ್ರಶ್ನೆಯನ್ನು ಹಾಸ್ಯಕ್ಕಾಗಿ ಕೇಳಿರಬಹುದು, ಆದರೆ ನಿಮ್ಮ ಪ್ರಶ್ನೆಯನ್ನು ಗಮನವಿಟ್ಟು ನೋಡಿ, ನೀವು ಏನು ಹೇಳಲು ಪ್ರಯತ್ನಿಸುತ್ತಿದ್ದೀರಿ ಎಂಬುದನ್ನು ಅರ್ಥಮಾಡಿಕೊಳ್ಳಿ, ಏಕೆಂದರೆ ಅದು ಚೆನ್ನಾಗಿರುವುದಿಲ್ಲ. ಕಳೆದ 18 ವರ್ಷಗಳಿಂದ ನಾನು ಶ್ರಮಿಸಿ ಗಳಿಸಿದ ಸ್ಥಾನಕ್ಕೆ ಗೌರವ ನೀಡಿ ಮತ್ತು ಲಿಂಗ ತಾರತಮ್ಯವನ್ನು ನಿಲ್ಲಿಸಿ. ಧನ್ಯವಾದಗಳು,” ಎಂದು ಖಾರವಾಗಿ ಉತ್ತರಿಸಿದ್ದಾರೆ.
ಇದನ್ನೂ ಓದಿ: Team India : ಇಂಗ್ಲೆಂಡ್ ಪ್ರವಾಸಕ್ಕೆ ಮೊಹಮ್ಮದ್ ಶಮಿ ಅನುಮಾನ, ಅರ್ಶದೀಪ್ ಸಿಂಗ್ ಆಯ್ಕೆ —
ಪ್ರೀತಿ ಝಿಂಟಾ ಸಹ-ಮಾಲೀಕತ್ವದ ಪಂಜಾಬ್ ಕಿಂಗ್ಸ್ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ತಂಡವು 7 ಪಂದ್ಯಗಳಲ್ಲಿ ಗೆದ್ದು, 3 ರಲ್ಲಿ ಸೋತಿದ್ದು, 1 ಪಂದ್ಯವು ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಪಿಬಿಕೆಎಸ್ ತನ್ನ ಮುಂದಿನ ಪಂದ್ಯವನ್ನು ಮೇ 18 ರಂದು ಜೈಪುರದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ.