ಹಾವೇರಿ: ಹಣಕಾಸು ವಿಚಾರವಾಗಿ ಎರಡು ಕುಟುಂಬದ ನಡುವೆ ನಡೆಯುತ್ತಿದ್ದ ಜಗಳವನ್ನು ಬಿಡಿಸು ಹೋದ ಗರ್ಭಿಣಿ ಮಹಿಳೆಯ ಹೊಟ್ಟೆಗೆ ಒದ್ದು ಹಲ್ಲೆ ಮಾಡಿದ ಪರಿಣಾಮ ಹೊಟ್ಟೆಯಲ್ಲಿದ್ದ ಅವಳಿ ಮಕ್ಕಳು ಸಾವನ್ನಪ್ಪಿರುವ ಘೋರ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಅಲ್ಲಿಪುರ ಗ್ರಾಮದಲ್ಲಿ ನಡೆದಿದೆ.
ಪವಿತ್ರ ಮುತ್ತಪ್ಪ ಲಮಾಣಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಣಂತಿ ಮಹಿಳೆ. ಕಳೆದ ಮಾರ್ಚ್ 28 ರಂದು ಈ ನಡೆದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅವಧಿಪೂರ್ವದಲ್ಲಿ ಜನಿಸಿದ ಪುಟ್ಟ ಕಂದಮ್ಮಗಳು ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ.
ಪವಿತ್ರಾಳ ಸೀಮಂತ ಕಾರ್ಯ ಮಾಡುವ ಸಂಬಂಧ ತಾಯಿ ಹಾಲವ್ವ ಮಾತನಾಡುತ್ತಾ ಕುಳಿತಾಗ, ತೆಗೆದುಕೊಂಡ ಹಣವನ್ನು ವಾಪಸ್ ಕೊಡುವಂತೆ ನಾಲ್ವರು ಆರೋಪಿತರು ಗಲಾಟೆ ಮಾಡಿದ್ದಾರೆ. ಈ ವೇಳೆ ಹಾಲವ್ವ, ಸ್ವಲ್ಪ ಸಮಯ ಕೊಡಿ ಮಗಳ ಸೀಮಂತ ಇದೆ ಆಮೇಲೆ ಹಣ ವಾಪಸು ಕೊಡ್ತನಿ ಎಂದಿದ್ದಾರೆ. ಆದರೂ ಸುಮ್ಮನಾಗದ ಆರೋಪಿಗಳು ತಾಯಿ ಹಾಲವ್ವ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಜಗಳ ಬಿಡಿಸಲು ಹೋದ ಗರ್ಭಿಣಿ ಪವಿತ್ರ ಹೊಟ್ಟೆಯ ಮೇಲೆ ಹಲ್ಲೆ ಮಾಡದ್ದಾರೆ. ಗರ್ಭಿಣಿ ಹೊಟ್ಟೆಗೆ ಒದ್ದಿದ್ದರಿಂದ ಹೊಟ್ಟೆಯಲ್ಲಿದ್ದ ಎರಡು ಮಕ್ಕಳಿಗೆ ಪೆಟ್ಟು ಬಿದ್ದು ಅವಧಿಗೂ ಮುನ್ನವೇ ಜನಿಸಿದ್ದರಿಂದ ಈ ದುರಂತ ಸಂಭವಿಸಿದೆ.
ಈ ಘಟನಾ ಸಂಬಂಧ ತಾಯಿ ಹಾಲವ್ವ ಸವಣೂರು ಪೊಲೀಸ್ ಠಾಣೆಯಲ್ಲಿ ಸುರೇಶ ಲಮಾಣಿ, ಪರಶುರಾಮ ಲಮಾಣಿ, ಮಹೇಶ ಲಮಾಣಿ ಹಾಗೂ ಸಕ್ಕುಬಾಯಿ ಎಂಬವರ ವಿರುದ್ಧ ಪ್ರಕರಣ ದಾಖಲಿಸಿ ಆಪಾದಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಸವಣೂರು ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ರೈಲಿನಲ್ಲೇ ಗಾಂಜಾ ಸೇವಿಸಿದ ಪುಂಡರು – ಕ್ರಮಕ್ಕೆ ಆಗ್ರಹ



















