ಮುಂಬೈ: ಗರ್ಭಿಣಿಯಾಗಿದ್ದ ಬಾಂಗ್ಲಾದೇಶಿ ಕೈದಿಯೊಬ್ಬಳು ಮುಂಬೈನ ಜೆಜೆ ಆಸ್ಪತ್ರೆಯಿಂದ ಪರಾರಿಯಾಗಿರುವ ಆಘಾತಕಾರಿ ಘಟನೆ ನಡೆದಿದ್ದು, ಕೈದಿಗಳ ಭದ್ರತಾ ಶಿಷ್ಟಾಚಾರಗಳ ಬಗ್ಗೆ ಪ್ರಶ್ನೆಯನ್ನು ಹುಟ್ಟುಹಾಕಿದೆ. ಗುರುವಾರ ಮಧ್ಯಾಹ್ನ ಆಕೆ ಪರಾರಿಯಾದ ನಂತರ ಮುಂಬೈ ಪೊಲೀಸರು ಆಕೆಯ ಪತ್ತೆಯಾಗಿ ನಗರವ್ಯಾಪಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ರುಬಿನಾ ಇರ್ಷಾದ್ ಶೇಖ್ (25) ಎಂಬಾಕೆಯೇ ತಪ್ಪಿಸಿಕೊಂಡಿರುವ ಕೈದಿ. ಈಕೆಯನ್ನು ಆಗಸ್ಟ್ 7 ರಂದು ನಕಲಿ ಜನನ ಪ್ರಮಾಣಪತ್ರವನ್ನು ಬಳಸಿ ಭಾರತೀಯ ಪಾಸ್ಪೋರ್ಟ್ ಪಡೆದ ಆರೋಪದ ಮೇಲೆ ವಾಶಿ ಪೊಲೀಸರು ಬಂಧಿಸಿದ್ದರು. ಆಕೆಯ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳು, ಪಾಸ್ಪೋರ್ಟ್ ಕಾಯಿದೆ ಮತ್ತು ವಿದೇಶಿಯರ ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಬೈಕುಲ್ಲಾ ಮಹಿಳಾ ಜೈಲಿಗೆ ಕಳುಹಿಸಲಾಗಿತ್ತು.
ಇತ್ತೀಚೆಗೆ ಅವರಿಗೆ ಜ್ವರ, ಶೀತ ಹಾಗೂ ಚರ್ಮದ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಆಗಸ್ಟ್ 11 ರಂದು ರುಬಿನಾ ಅವರನ್ನು ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಐದು ತಿಂಗಳ ಗರ್ಭಿಣಿಯಾಗಿದ್ದರಿಂದ ವೈದ್ಯಕೀಯ ತಪಾಸಣೆಗೂ ಒಳಪಡಿಸಲಾಗಿತ್ತು. ಆಗಸ್ಟ್ 14ರ ಮಧ್ಯಾಹ್ನ, ಆಕೆ ತನ್ನನ್ನು ಕರೆದುಕೊಂಡು ಹೋಗುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಮಂಕುಬೂದಿ ಎರಚಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.
ಆಸ್ಪತ್ರೆಯಲ್ಲಿನ ಜನಸಂದಣಿಯ ಲಾಭ ಪಡೆದು, ಆಕೆ ಒಬ್ಬ ಕಾನ್‌ಸ್ಟೇಬಲ್ ಅನ್ನು ತಳ್ಳಿ ಪರಾರಿಯಾಗಿದ್ದಾಳೆ.
ಪೊಲೀಸರು ಕಾಣೆಯಾದ ಕೈದಿಗಾಗಿ ಹುಡುಕಾಟವನ್ನು ತೀವ್ರಗೊಳಿಸಿದ್ದಾರೆ. ರುಬಿನಾ ಅವರನ್ನು ಆದಷ್ಟು ಬೇಗ ಬಂಧಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜೈಲಿನಿಂದ ಆಸ್ಪತ್ರೆಗಳಿಗೆ ಕರೆತರಲಾಗುವ ಕೈದಿಗಳ ಭದ್ರತಾ ವ್ಯವಸ್ಥೆಯ ಬಗ್ಗೆಯೂ ಈ ಘಟನೆ ದೊಡ್ಡ ಪ್ರಶ್ನೆಗಳನ್ನು ಹುಟ್ಟುಹಾಕಿದೆ.



















