ಬೆಂಗಳೂರು: ಕಾಡ್ಗಿಚ್ಚು ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮವಹಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.
ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪದೇ ಪದೇ ಕಾಡ್ಗಿಚ್ಚು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ರಾಜ್ಯದ ಯಾವುದೇ ಅರಣ್ಯದಲ್ಲಿ ಕಾಡ್ಗಿಚ್ಚು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಾಡ್ಗಿಚ್ಚು ನಂದಿಸಲು ಅಗ್ನಿಶಾಮಕ ಸಾಧನಗಳು ಮತ್ತು ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇಡುವಂತೆ ಸಚಿವರು ನಿರ್ದೇಶನ ನೀಡಿದ್ದಾರೆ. ಇತ್ತೀಚೆಗಷ್ಟೇ ಚಾರ್ಮಾಡಿ ಘಾಟ್ ನ ಬಿದಿರುತಳ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚಿ ಕಾಣಿಸಿಕೊಂಡಿತ್ತು.
ಹೀಗಾಗಿ ಎಚ್ಚೆತ್ತುಕೊಂಡಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ, ಅರಣ್ಯಕ್ಕೆ ಆಗಿರುವ ಹಾನಿಯ ಕುರಿತಂತೆಯೂ ವರದಿ ನೀಡುವಂತೆ ಕೇಳಿದ್ದಾರೆ. ಕಾಡ್ಗಿಚ್ಚಿನ ಬಗ್ಗೆ ಸಂಬಂಧಿತ ವಲಯಕ್ಕೆ ಮಾಹಿತಿ ಲಭಿಸಿದ ಎಷ್ಟು ಸಮಯದಲ್ಲಿ ಬೆಂಕಿ ನಂದಿಸಲು ಕ್ರಮ ವಹಿಸಲಾಗಿದೆ? ಯಾವ ಯಾವ ವಿಧಾನ ಬಳಸಲಾಗಿದೆ? ಮತ್ತು ಎಷ್ಟು ಸಂಭಾವ್ಯ ಹಾನಿ ತಡೆಯಲಾಗಿದೆ? ಎಂಬುವುದರ ಬಗ್ಗೆ 7 ದಿನಗಳ ಒಳಗಾಗಿ ವರದಿ ನೀಡುವಂತೆ ಸೂಚಿಸಿದ್ದಾರೆ. ಹೀಗಾಗಿಯೇ ಮುಂದಿನ ದಿನಗಲಲ್ಲಿ ರಾಜ್ಯದಲ್ಲಿರುವ ಅರಣ್ಯಕ್ಕೆ ಯಾವುದೇ ಹಾನಿಯಾಗದಂತೆ ಕಾಪಾಡಲು ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.