ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 28ರಂದು ಸಂಜೆ 5ಕ್ಕೆ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಕುವೆಂಪು ಭಾಷಾ ತರಬೇತಿ ಪ್ರಾಧಿಕಾರದ ಡಾ. ಚನ್ನಪ್ಪ ಕಟ್ಟಿ ಉದ್ಘಾಟಿಸಲಿದ್ದಾರೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ್ ಜೋಶಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ ಅತಿಥಿಗಳಾಗಿ ಆಗಮಿಸಲಿದ್ದು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ಆಯುಕ್ತ ಡಾ. ಎಂ.ವಿ. ವೆಂಕಟೇಶ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವಿತರಿಸುವ ದತ್ತಿ ಪ್ರಶಸ್ತಿಗಳಿಗೆ ವಿವಿಧ ಸಾಧಕರನ್ನು ಆಯ್ಕೆ ಮಾಡಲಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ, ಕುವೆಂಪು ಸಿರಿಗನ್ನಡ ದತ್ತಿ, ನಾಗಡಿಕೆರೆ-ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಹಳ್ಳಿ ದತ್ತಿ, ಮಾಹಿತಿಹಕ್ಕು ತಜ್ಞ ಜೆ.ಎಂ. ರಾಜಶೇಖರ ದತ್ತಿ, ನಿಂಗಮ್ಮ ಹುಚ್ಚೇಗೌಡ ಕೋಡಿಹೊಸಹಳ್ಳಿ ದತ್ತಿ ಪ್ರಶಸ್ತಿಗಳಿಗೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಕುವೆಂಪು ಸಿರಿಕನ್ನಡ ದತ್ತಿ ಪ್ರಶಸ್ತಿಗೆ ಕನ್ನಡಪರ ಹೋರಾಟಗಾರ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಪ್ರವೀಣ್ ಕುಮಾರ್ ಶೆಟ್ಟಿ ಉಡುಪಿ ಜಿಲ್ಲೆಯ ನಾಲ್ಕೂರು ಗ್ರಾಮದವರು. ಹೋಟೆಲ್ ಉದ್ಯಮ ಆರಂಭಿಸಿದ ಇವರು, ತಮ್ಮ ಮೇಲೆ ಇದ್ದ ನೂರಾರು ಮೊಕದ್ದಮೆಗಳು, ಸೆರೆವಾಸ, ಲಾಟಿ ಏಟು ಬಿದ್ದರೂ ಸಾಮಾಜಿಕ ಹೋರಾಟದಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡಿಗರಿಂದ, ಕನ್ನಡಿಗರಿಗಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಮೂಲಕ ಹೋರಾಟಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿದ್ದಾರೆ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ, ಅಣ್ಣಾವ್ರ ಸ್ಮಾರಕ್ಕಾಗಿ ಉಪವಾಸ ಸತ್ಯಾಗ್ರಹ, ಗಡಿ ಉಲ್ಲಂಘನೆ ಹೋರಾಟ, ಆಂಧ್ರ ಮೂಲದ ಕಲಬೆರಕೆ ಹಾಲಿನ ವಿರುದ್ಧ ಹೋರಾಟ, ಪ್ಲೇವಿನ್ ಲಾಟರಿ ವಿರುದ್ಧ ಹೋರಾಟ ಸೇರಿದಂತೆ ಹಲವಾರು ಹೋರಾಟಗಳನ್ನು ನಡೆಸಿದ್ದಾರೆ. ಅವರ ಇಂತಹ ಕನ್ನಡಪರ ಹೋರಾಟ ಸೇವೆಯನ್ನು ಪರಿಗಣಿಸಿ ಕನ್ನಡ ಸಾಹಿತ್ಯ ಪರಿಷತ್ತು 2024ನೇ ಸಾಲಿನ ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಅಲ್ಲದೇ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ, ಪತ್ರಕರ್ತ ರವೀಂದ್ರ ಭಟ್ಟ ಅವರಿಗೆ ನಾಗಡಿಕೆರೆ-ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿ, ಸಾಮಾಜಿಕ ಹೋರಾಟಗಾರ ಸಾ.ತಿ. ಸದಾನಂದ ಗೌಡ ಅವರಿಗೆ ಮಾಹಿತಿ ಹಕ್ಕು ತಜ್ಞ ಜೆ.ಎಂ. ರಾಜಶೇಖರ ದತ್ತಿ ಪ್ರಶಸ್ತಿ, ಜನಪದ ಕಲಾವಿದರಾದ ಸಾಕಮ್ಮ ಪಡಸಲಹಟ್ಟಿ, ಬಾನಂದೂರ ಬೋರಮ್ಮ ಅವರಿಗೆ ನಿಂಗಮ್ಮ ಹುಚ್ಚೇಗೌಡ ಕೋಡಿಹೊಸಹಳ್ಳಿ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.