ಬೆಂಗಳೂರು: ಡೈನಾಮಿಕ್ ಹೀರೊ ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಮ್ ದೇವರಾಜ್ ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.
ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಪ್ರಣಮ್ ನಾಯಕನಾಗಿ ನಟಿಸಿರುವ ‘S/O ಮುತ್ತಣ್ಣ’ ಚಿತ್ರ ತಂಡ ನೆಚ್ಚಿನ ನಾಯಕನಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದೆ. ಅಲ್ಲದೇ, ಈ ಸಂದರ್ಭದಲ್ಲಿ ಮತ್ತೊಂದು ಸಂತೋಷದ ವಿಷಯ ಹೊರ ಬಿದ್ದಿದೆ. S/O ಮುತ್ತಣ್ಣ’ ಚಿತ್ರತಂಡ ಹಾಗೂ ಪ್ರಣಮ್ ಅವರ ಕಾಂಬಿನೇಶನ್ ನಲ್ಲಿ ಸದ್ಯದಲ್ಲೇ ಮತ್ತೊಂದು ನೂತನ ಚಿತ್ರ ಸೆಟ್ಟೇರುತ್ತಿದೆ.

“S/O ಮುತ್ತಣ್ಣ” ಚಿತ್ರ ಈಗಾಗಲೇ ಟೀಸರ್ ಮೂಲಕ ಭಾರೀ ಸದ್ದು ಮಾಡುತ್ತಿದೆ. ಅಲ್ಲದೇ, ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಈ ಚಿತ್ರದ ಟೀಸರ್ ಕರುನಾಡ ಚಕ್ರವರ್ತಿ ರಿಯಲ್ “S/O ಮುತ್ತಣ್ಣ” ಶಿವರಾಜಕುಮಾರ್ ಅವರಿಂದ ಅನಾವರಣಗೊಂಡಿತ್ತು. ಸದ್ಯದಲ್ಲೇ ಚಿತ್ರದ ಪ್ರಥಮ ಪ್ರತಿ ಸಿದ್ದವಾಗಲಿದೆ. ಮಾರ್ಚ್ ವೇಳೆಗೆ ಈ ಚಿತ್ರ ತೆರೆಗೆ ಅಪ್ಪಳಿಸಲಿದೆ ಎನ್ನಲಾಗಿದೆ. ಈ ಚಿತ್ರದ ಚಿತ್ರೀಕರಣ ಬೆಂಗಳೂರು ಹಾಗೂ ಕಾಶಿಯಲ್ಲಿ ನಡೆದಿದೆ. ಪುರಾತನ ಫಿಲಂಸ್ ಹಾಗೂ ಎಸ್ ಅರ್ ಕೆ ಫಿಲಂಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವನ್ನು ಶ್ರೀಕಾಂತ್ ಹುಣಸೂರು ನಿರ್ದೇಶಿಸಿದ್ದಾರೆ. ರಚನೆ ಹಾಗೂ ನಿರ್ದೇಶನ ಶ್ರೀಕಾಂತ್ ಹುಣಸೂರು ಅವರದೆ. ಶ್ರೀಕಾಂತ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ.

ಪ್ರಣಮ್ ದೇವರಾಜ್ ಅವರಿಗೆ ನಾಯಕಿಯಾಗಿ ದಿಯಾ ಖ್ಯಾತಿಯ ಖುಷಿ ರವಿ ಅಭಿನಯಿಸಿದ್ದಾರೆ. ರಂಗಾಯಣ ರಘು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್, ಗಿರೀಶ್ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸಚಿನ್ ಬಸ್ರೂರು ಸಂಗೀತವಿರುವ ‘s/o ಮುತ್ತಣ್ಣ’ ಸಿನಿಮಾದ ಹಾಡುಗಳನ್ನು ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಬರೆದಿದ್ದಾರೆ.
