ಹೈದರಾಬಾದ್: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ಭಾಷಾ ಸಮರವು ಈಗ ಚಿತ್ರರಂಗಕ್ಕೂ ಕಾಲಿಟ್ಟಿದ್ದು, ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ ತಮ್ಮ ಮುಂಬರುವ ಚಿತ್ರ ‘ಒ.ಜಿ.’ಯ ಸಹನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ವಿರುದ್ಧ ಭಾಷೆಯ ವಿಷಯದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪವನ್ ಕಲ್ಯಾಣ್ ಅವರು ತೆಲುಗು ಜನರಿಗೆ ಹಿಂದಿ ಭಾಷೆಯನ್ನು ಮಾತನಾಡಲು ಸೂಚಿಸಿರುವುದನ್ನು ಖಂಡಿಸಿರುವ ಪ್ರಕಾಶ್ ರಾಜ್, ಈ ಕ್ರಮವನ್ನು “ನಾಚಿಕೆಗೇಡಿನ” ಸಂಗತಿ ಎಂದು ಬಣ್ಣಿಸಿದ್ದಾರೆ. ಈ ವಿವಾದವು ಇತ್ತೀಚೆಗೆ ತಮಿಳುನಾಡಿನಲ್ಲಿ ಹಿಂದಿ ಭಾಷೆಯನ್ನು “ಒತ್ತಾಯದಿಂದ ಹೇರುವ” ಕುರಿತು ಪವನ್ ಕಲ್ಯಾಣ್ ಮಾಡಿದ ಭಾಷಣದಿಂದ ಭುಗಿಲೆದ್ದಿದೆ.
ಇತ್ತೀಚೆಗೆ ಆಂಧ್ರಪ್ರದೇಶದ ಕಾಕಿನಾಡದ ಪಿತಾಪುರಂನಲ್ಲಿ ನಡೆದ ಜನಸೇನಾ ಪಕ್ಷದ 12ನೇ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದ್ದ ಪವನ್ ಕಲ್ಯಾಣ್, ತಮಿಳುನಾಡಿನ ರಾಜಕಾರಣಿಗಳ “ದ್ವಿಮುಖ ಧೋರಣೆ”ಯನ್ನು ಟೀಕಿಸಿದ್ದರು. ತಮಿಳುನಾಡಿನ ರಾಜಕಾರಣಿಗಳು ಹಿಂದಿ ಭಾಷೆಯನ್ನು ವಿರೋಧಿಸುತ್ತಾರೆ, ಆದರೆ ತಮ್ಮ ಚಿತ್ರಗಳನ್ನು ಹಿಂದಿಗೆ ಡಬ್ ಮಾಡಿ ಬಾಲಿವುಡ್‌ನಿಂದ ಆರ್ಥಿಕ ಲಾಭ ಪಡೆಯುತ್ತಾರೆ ಎಂದು ಆರೋಪಿಸಿದ್ದರು. “ತಮಿಳುನಾಡಿನ ರಾಜಕಾರಣಿಗಳು ಹಿಂದಿಯನ್ನು ವಿರೋಧಿಸುತ್ತಾರೆ, ಆದರೆ ತಮಿಳು ಚಿತ್ರಗಳನ್ನು ಹಿಂದಿಗೆ ಡಬ್ ಮಾಡಲು ಅವಕಾಶ ನೀಡುತ್ತಾರೆ. ಇದು ಯಾವ ತರ್ಕ?” ಎಂದು ಅವರು ಪ್ರಶ್ನಿಸಿದ್ದರು. ಭಾರತದಲ್ಲಿ ಭಾಷಾ ವೈವಿಧ್ಯತೆಯನ್ನು ಗೌರವಿಸಬೇಕು ಮತ್ತು ತಮಿಳು ಸೇರಿದಂತೆ ಎಲ್ಲ ಭಾಷೆಗಳಿಗೂ ಸಮಾನ ಮಾನ್ಯತೆ ನೀಡಬೇಕು ಎಂದು ಅವರು ಒತ್ತಿಹೇಳಿದ್ದರು. ಪವನ್ ಕಲ್ಯಾಣ್‌ರ ಈ ಹೇಳಿಕೆಯು ತಮಿಳುನಾಡಿನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
“ನಮ್ಮ ಮಾತೃಭಾಷೆ, ನಮ್ಮ ಗುರುತು” ಎಂದು ಪ್ರಕಾಶ್ ರಾಜ್
ಪವನ್ ಕಲ್ಯಾಣ್‌ರ ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪ್ರಕಾಶ್ ರಾಜ್, ತಮ್ಮ ಎಕ್ಸ್ ಖಾತೆಯಲ್ಲಿ, “ನಿಮ್ಮ ಹಿಂದಿ ಭಾಷೆಯನ್ನು ನಮ್ಮ ಮೇಲೆ ಹೇರಬೇಡಿ. ಇದು ಇನ್ನೊಂದು ಭಾಷೆಯನ್ನು ದ್ವೇಷಿಸುವ ವಿಚಾರ ಅಲ್ಲ, ಬದಲಾಗಿ ನಮ್ಮ ಮಾತೃಭಾಷೆಯನ್ನು, ನಮ್ಮ ಸಾಂಸ್ಕೃತಿಕ ಗುರುತನ್ನು ಸ್ವಾಭಿಮಾನದಿಂದ ಕಾಪಾಡಿಕೊಳ್ಳುವ ವಿಚಾರ. ಯಾರಾದರೂ ಇದನ್ನು ಪವನ್ ಕಲ್ಯಾಣ್‌ಗೆ ವಿವರಿಸಿ” ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ನಿಮ್ಮನ್ನು ನೀವೇ ಮಾರಾಟ ಮಾಡಿಕೊಂಡಿದ್ದೀರಾ ಎಂದು ಪ್ರಶ್ನಿಸಿದ ಅವರು, ಪವನ್ ಕಲ್ಯಾಣ ಹೇಳಿಕೆಯು ನಾಚಿಕೆಗೇಡಿನದ್ದು ಎಂದಿದ್ದಾರೆ. ಪ್ರಕಾಶ್ ರಾಜ್‌ರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಪವನ್ ಕಲ್ಯಾಣ್‌ರನ್ನು ಉಲ್ಲೇಖಿಸಿ “ನಾಚಿಕೆಗೇಡಿನ” ಎಂದು ಕರೆದಿರುವುದು ವಿವಾದವನ್ನು ಇನ್ನಷ್ಟು ತೀವ್ರಗೊಳಿಸಿದೆ.
ಪ್ರಕಾಶ್ ರಾಜ್ ಮತ್ತು ಪವನ್ ಕಲ್ಯಾಣ್ ತೆಲುಗು ಚಿತ್ರರಂಗದಲ್ಲಿ ‘ಜಲ್ಸಾ’, ‘ವಕೀಲ್ ಸಾಬ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಪ್ರಸ್ತುತ, ಇವರಿಬ್ಬರೂ ಸುಜೀತ್ ನಿರ್ದೇಶನದ ‘ಒ.ಜಿ.’ ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಈ ಭಾಷಾ ವಿವಾದವು ರಾಜಕೀಯ ಮತ್ತು ಸಿನಿಮಾ ರಂಗದಲ್ಲಿ ತೀವ್ರ ಸಂಘರ್ಷಕ್ಕೆ ಕಾರಣವಾಗಿದೆ.



















